ನವದೆಹಲಿ: 2019-2020ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನು ಕೇಂದ್ರ ನೇರ ತೆರಿಗೆ ಮಂಡಳಿ ಮತ್ತೆ ನಾಲ್ಕನೇ ಬಾರಿ ಮುಂದೂಡಿದೆ. ಈ ಹಿಂದೆ ಐಟಿಆರ್ (ಆದಾಯ ತೆರಿಗೆ ರಿಟರ್ನ್ಸ್) ಸಲ್ಲಿಸುವ ಕೊನೆಯ ದಿನಾಂಕ ಸೆಪ್ಟೆಂಬರ್ 30 ಎಂದು ತಿಳಿಸಿತ್ತು. ಇದೀಗ ನವೆಂಬರ್ 30ರವರೆಗೆ ವಿಸ್ತರಿಸಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನು ನಾಲ್ಕನೇ ಬಾರಿ ಮುಂದೂಡಿದಂತಾಗಿದೆ. ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಮೊದಲು ಜೂನ್ 30 ಕೊನೆಯ ದಿನಾಂಕ ಎಂದು ತಿಳಿಸಿದ್ದು, ನಂತರ ಜುಲೈ 31, ಸೆಪ್ಟೆಂಬರ್ 30 ಇದೀಗ ನವೆಂಬರ್ 30 ಕೊನೆಯ ದಿನಾಂಕ ಎಂದು ಹೇಳಿದೆ.
ಕೋವಿಡ್ 19 ಸೋಂಕಿನಿಂದಾಗಿ ತೆರಿಗೆ ಪಾವತಿದಾರರು ತುಂಬಾ ಕಷ್ಟವನ್ನು ಅನುಭವಿಸುತ್ತಿರುವುದನ್ನು ಪರಿಗಣಿಸಿ 2019-20ನೇ ಸಾಲಿನ ಪರಿಷ್ಕೃತ ಐಟಿಆರ್ ಮತ್ತು ಪ್ರಸ್ತುತ ಸಾಲಿನ ಐಟಿಆರ್ ಗಳನ್ನು ಸಲ್ಲಿಸಲು ನವೆಂಬರ್ 30ರವರೆಗೆ ಕೊನೆಯ ದಿನಾಂಕ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಪ್ರಕಟಣೆ ಹೊರಡಿಸಿದೆ.
ಜಿಎಸ್ ಟಿ ರಿಟರ್ನ್ಸ್:
ಕೇಂದ್ರ ಸರ್ಕಾರ ಕೂಡಾ 2019ನೇ ಸಾಲಿನ ವಾರ್ಷಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಪಾವತಿಯ ದಿನಾಂಕವನ್ನು 2020ರ ಅಕ್ಟೋಬರ್ ವರೆಗೆ ವಿಸ್ತರಿಸಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣಾ ನೀತಿ ಸಂಹಿತೆ ಕುರಿತು ಮಾಹಿತಿ ಪಡೆದ ನಂತರ ವಾರ್ಷಿಕ ಜಿಎಸ್ ಟಿ ಪಾವತಿಯ ಅಂತಿಮ ಗಡುವನ್ನು ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.