Advertisement

ITF ಟೆನಿಸ್ ಟೂರ್ನಿ; ಡಬಲ್ಸ್ ವಿಭಾಗದಲ್ಲಿ ರಾಮಕುಮಾರ್ ಗೆಲುವಿನ ಅಭಿಯಾನ ಪ್ರಾರಂಭ

07:50 PM Oct 24, 2023 | Team Udayavani |

ದಾವಣಗೆರೆ: ಧಾರವಾಡದಲ್ಲಿ ನಡೆದ ಐಟಿಎಫ್ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ಭಾರತದ ಪ್ರಮುಖ ಆಟಗಾರ ರಾಮಕುಮಾರ್ ರಾಮನಾಥನ್ ದಾವಣಗೆರೆಯಲ್ಲಿ ಮಂಗಳವಾರದಿಂದ ಪ್ರಾರಂಭವಾದ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಗೆಲುವಿನ ಅಭಿಯಾನ ಪ್ರಾರಂಭಿಸಿದರು.

Advertisement

ಚೀನಾದಲ್ಲಿ ನಡೆದ ಏಷ್ಯಾಡ್‌ನಲ್ಲಿ ಬೆಳ್ಳಿ ಪದಕ ಗಳಿಸಿರುವ ರಾಮಕುಮಾರ್ ರಾಮನಾಥನ್ ಮತ್ತು ಮುಂಬೈನ ಪೂರವ್ ರಾಜಾ ಅವರೊಡಗೂಡಿ ಗೆಲುವಿನ ನಗೆ ಬೀರಿದರು.

ಭಾರತದವರೇ ಆದ ಜೇವಿಯದೇವ್ ಮತ್ತು ಮಲೇಷ್ಯಾದ ಮಿಟ್ಸುಕಿ ವೀ ಕಾಂಗ್ ಲಿಯಾಂಗ್ ಅವರನ್ನು ರಾಮ ಕುಮಾರ್ ರಾಮನಾಥನ್, ಪೂರವ್ ರಾಜಾ ಜೋಡಿ 6-3, 7-6 (4) ನೇರ ಸೆಟ್‌ಳಿಂದ ಸೋಲಿಸಿ, ಮುಂದಿನ ಸುತ್ತಿಗೆ ಮುನ್ನಡೆದರು.

ಜಿಲ್ಲಾ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಟೂರ್ನಿಯ ಅಗ್ರ ಶ್ರೇಯಾಂಕ ಆಟಗಾರ ರಾಮಕುಮಾರ್ ರಾಮ ನಾಥನ್ ಮತ್ತು ಪೂರವ್ ರಾಜಾ ಜೋಡಿ ಆರಂಭದಿಂದಲೇ ಕರಾರುವಕ್ಕಾದ ಆಟದ ಮೂಲಕ ಗಮನ ಸೆಳೆದರು. ಎದುರಾಳಿಗಳಾದ ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದು ನಿರೀಕ್ಷೆ ಮೂಡಿಸಿದ್ದ ರಾಮಕುಮಾರ್ ಮತ್ತು ಪೂರವ್, ಎರಡನೇ ಸುತ್ತಿನಲ್ಲಿ ಗೆಲುವಿಗಾಗಿ ಪ್ರಯಾಸ ಪಡಬೇಕಾಯಿತು. ಟ್ರೈಬ್ರೇಕರ್‌ನಲ್ಲಿ ಜಯ ಸಾಧಿಸಿದರು.

ಚಿರಾಗ್ ದುಹಾನ್ ಮತ್ತು ಆದಿಲ್ ಕಲ್ಯಾಣಪುರ ವಿರುದ್ಧ ಜಯ ಗಳಿಸಿರುವ ಜಯಪ್ರಕಾಶ್ ಮತ್ತು ಮಾಡ್ವಿನ್ ಕಾಮತ್ ಅವರನ್ನು ಎಂಟರ ಘಟ್ಟದಲ್ಲಿ ರಾಮಕುಮಾರ್ ಮತ್ತು ಪೂರವ್ ಜೋಡಿ ಎದುರಿಸಲಿದೆ.

Advertisement

ಇತರ ಡಬಲ್ಸ್ ಪಂದ್ಯಗಳಲ್ಲಿ ಟೂರ್ನಿಯ ಎರಡನೇ ಶ್ರೇಯಾಂಕದ ಅಮೆರಿಕದ ಬೋಗ್ದಾನ್ ಬೋಬ್ರೋವ್- ನಿಕ್ ಚಾಪೆಲ್ ಜೋಡಿಯು 6-7 (4), 6-1, 11-9ರಿಂದ ರಿಷಬ್ ಅಗರವಾಲ್- ನಿತಿನ್ ಕುಮಾರ್ ಸಿನ್ಹಾ ಜೋಡಿ ವಿರುದ್ಧ ಸುಮಾರು ಒಂದೂಕಾಲು ಗಂಟೆ ಸೆಣಸಾಡಿ ಗೆಲುವು ಪಡೆಯಿತು.

ಮೂರನೇ ಶ್ರೇಯಾಂಕದ ಸಾಯಿ ಕಾರ್ತೀಕ್ ರೆಡ್ಡಿಧಡ ಗಂಟಾ, ಮನೀಶ್ ಸುರೇಶಕುಮಾರ್ ಜೋಡಿ ಆಸ್ಟ್ರೇಲಿಯ ದ ಲೂಕ್ ಸೊರೆನ್ಸೆನ್- ಮ್ಯಾಥ್ಯೂ ವರ್ನಡಲ್ ಅವರನ್ನು7-5, 6-2 ರಿಂದ ಮಣಿಸಿ ಎಂಟರ ಘಟ್ಟಕ್ಕೆ ಮುನ್ನಡೆ ಯಿತು.

ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ರಾಘವ್ ಜೈಸಿಂಘಾನಿ-ರಿಷಿ ರೆಡ್ಡಿ ಜೋಡಿಯು ತುಷಾರ್ ಮದನ್- ಅಥರ್ವ ಶರ್ಮ ಜೋಡಿಯನ್ನು 6-7 (4), 6-4, 10-7ರಿಂದ ಪ್ರಯಾಸದ ಜಯ ಪಡೆಯಿತು. ಮತ್ತೊಂದು ಪಂದ್ಯದಲ್ಲಿ ಇಶಾಕ್ ಇಕ್ಬಾಲ್- ಫೈಸಲ್ ಖಮರ್ ಜೋಡಿಯು6-2, 7-6(4)ರಿಂದ ಪಾರ್ಥ ಅಗರವಾಲ್ ಮತ್ತು ಸಿದ್ಧಾರ್ಥ ರಾವತ್ ಜೋಡಿಯನ್ನು ಸುಲಭವಾಗಿ ಸೋಲಿಸಿತು.

ಸಿಂಗಲ್ಸ್‌ನಲ್ಲಿ ಸಿದ್ಧಾರ್ಥ ರಾವತ್ ಅವರು 6-1, 6-4ರಿಂದ ಸೂರಜ್ ಆರ್.ಪ್ರಬೋಧ್ ವಿರುದ್ಧ ಜಯ ಗಳಿಸಿದರೆ, ಕರಣ್ ಸಿಂಗ್6-1, 6-4 ರಿಂದ ರಿಷಿ ರೆಡ್ಡಿ ಅವರನ್ನು ಸುಲಭವಾಗಿ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next