Advertisement

ಬೀದಿ ನಾಯಿಗಳಿಗೆ ಕಜ್ಜಿ ಕಾಟ

04:35 PM Nov 23, 2021 | Team Udayavani |

ರಾಯಚೂರು: ಸದಾ ಗುಂಪು ಕಟ್ಟಿಕೊಂಡು ಓಡಾಡುತ್ತಿರುವ ಬೀದಿ ನಾಯಿಗಳಲ್ಲಿ ಕಜ್ಜಿ ಕಾಯಿಲೆ ಹೆಚ್ಚುತ್ತಿದ್ದು, ಅಂಟು ವ್ಯಾಧಿಯ ರೀತಿ ಪಸರಿಸುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

Advertisement

ಇದು ಕೇವಲ ಒಂದು ಎರಡು ಊರುಗಳ ಸಮಸ್ಯೆಯಾಗದೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇಂಥದ್ದೊಂದು ಸಮಸ್ಯೆ ಕಂಡು ಬರುತ್ತಿದೆ. ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 24,952 ನಾಯಿಗಳಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿಗೆ ಮಿತಿ ಇಲ್ಲದಾಗಿದೆ. ಕೆಲವೆಡೆ ಸಾರ್ವಜನಿಕರ ಮೇಲೆ, ಮಕ್ಕಳ ಮೇಲೆ ದಾಳಿ ಮಾಡಿದ ಉದಾಹರಣೆಗಳು ಕೂಡ ಉಂಟು. ಆದರೀಗ ಕಜ್ಜಿಯಂಥ ಸೋಂಕು ಒಂದು ನಾಯಿಯಿಂದ ಮತ್ತೊಂದು ನಾಯಿಗೆ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕರೆ ತಂದರೆ ಚುಚ್ಚುಮದ್ದಂತೆ

ಈ ಕುರಿತು ಪಶು ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಇದೊಂದು ಸಾಮಾನ್ಯ ಸೋಂಕು. ಇಂಥದ್ದೆ ಕಾಯಿಲೆ ಎಂದು ಹೇಳಲಾಗದು. ಚಳಿಗಾಲ ವೇಳೆಯಲ್ಲಿ ಹೆಚ್ಚಾಗುತ್ತಿದೆ. ಅಂಥ ಸೋಂಕಿತ ನಾಯಿಗಳನ್ನು ನಮ್ಮ ಪಶು ಚಿಕಿತ್ಸಾ ಕೇಂದ್ರಗಳಿಗೆ ಕರೆ ತಂದರೆ ಚುಚ್ಚುಮದ್ದು ನೀಡಲಾಗುವುದು ಎನ್ನುತ್ತಾರೆ. ಆದರೆ ಸಾಕು ನಾಯಿಗಳನ್ನು ಅಪ್ಪಿಕೊಂಡು ಹೋದ ರೀತಿ ಕಜ್ಜಿ ಹತ್ತಿದ ನಾಯಿಗಳನ್ನು ಯಾರು ಪಶು ಇಲಾಖೆಗೆ ಕರೆದೊಯ್ಯಲು ಸಾಧ್ಯ? ಕಾಲುಬಾಯಿ ರೋಗಕ್ಕೆ ಮನೆ ಮನೆಗೆ ಬಂದು ಚುಚ್ಚುಮದ್ದು ನೀಡುವ ರೀತಿಯಲ್ಲೇ ಬೀದಿ ನಾಯಿಗಳಿಗೂ ನೀಡಲಿ ಎನ್ನುವುದು ಸಾರ್ವಜನಿಕರ ಒತ್ತಾಯ.

ಮಕ್ಕಳ ಆರೋಗ್ಯಕ್ಕೆ ಕುತ್ತು

Advertisement

ಈ ಸಮಸ್ಯೆ ಪಾಲಕರನ್ನು ಕಂಗೆಡಿಸಿದೆ. ಬೀದಿ ನಾಯಿಗಳು ಕಂಡ ಕಂಡಲ್ಲಿ ತಿರುಗಾಡಿ ಬರುತ್ತವೆ. ಯಾರೂ ಇಲ್ಲವೆಂದರೆ ಮನೆಗಳಿಗೂ ನುಗ್ಗಿ ಅವಾಂತರ ಮಾಡುತ್ತವೆ. ಅದರಲ್ಲೂ ಚಿಕ್ಕ ಮಕ್ಕಳಿರುವ ಮನೆಗಳಿಗೆ ಇಂಥ ಕಜ್ಜಿ ಹತ್ತಿದ ನಾಯಿಗಳು ಬಂದರೆ ಏನು ಮಾಡುವುದು ಎಂಬ ಆತಂಕ ಎದುರಾಗಿದೆ. ಇನ್ನು ಹಳ್ಳಿಗಳಲ್ಲಿ, ನಗರದ ಸ್ಲಂಗಳಲ್ಲಿ, ಬಡಾವಣೆಗಳಲ್ಲಿ ಮಕ್ಕಳು ಆಡುವಾಗ ಇಂಥ ಬೀದಿ ನಾಯಿಗಳು ಅಕ್ಕಪಕ್ಕದಲ್ಲಿಯೇ ಸುಳಿಯುತ್ತವೆ. ಈ ಸೋಂಕಿನಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಕಡಿಮೆಯಾದರೆ ಏನು ಎಂಬ ಆತಂಕ ಎದುರಾಗಿದೆ.

ಮುನ್ನೆಚ್ಚರಿಕೆ ಅಗತ್ಯ

ಈಗ ಎಲ್ಲ ಬೀದಿ ನಾಯಿಗಳಲ್ಲಿ ಈ ಸಮಸ್ಯೆ ಕಂಡು ಬರುತ್ತಿಲ್ಲ. 10ರಲ್ಲಿ ಒಂದೆರಡು ನಾಯಿಗಳಿಗೆ ಕಂಡು ಬರುತ್ತಿದೆ. ಪಶು ಇಲಾಖೆ ಅಧಿಕಾರಿಗಳೇ ಹೇಳುವಂತೆ ಇದೊಂದು ಅಂಟು ವ್ಯಾದಿಯಾಗಿದ್ದು, ಒಂದರಿಂದ ಮತ್ತೂಂದು ನಾಯಿಗೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಮುಂದೆ ಎದುರಾಗುವ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು. ಅಲ್ಲದೇ ಈಗ ನಾಯಿ ಸಾಕುವ ಹವ್ಯಾಸ ಹೆಚ್ಚಾಗುತ್ತಿದ್ದು, ದುಬಾರಿ ಹಣ ಕೊಟ್ಟು ನಾಯಿ ಖರೀದಿಸಿದ ಮಾಲೀಕರಿಗೆ ವಿಹಾರಕ್ಕೆ ಬಂದಾಗ ಬೀದಿ ನಾಯಿಗಳ ಸಂಪರ್ಕದಿಂದ ಅವುಗಳಿಗೂ ಸೋಂಕು ತಗಲಿದರೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಮಾಲೀಕರು.

ಬೀದಿ ನಾಯಿಗಳಿಗೆ ಕಜ್ಜಿಯಾಗುವುದು ಸಾಮಾನ್ಯ. ಅದೊಂದು ಚರ್ಮ ಕಾಯಿಲೆ. ಅದಕ್ಕೆ ಚಿಕಿತ್ಸೆ ಇದೆ. ಆದರೆ, ಇದು ಹೆಚ್ಚುತ್ತಿರುವ ಬಗ್ಗೆ ಗಮನಕ್ಕಿಲ್ಲ. ಇದರಿಂದ ಬೇರೆ ಪ್ರಾಣಿಗಳಿಗೆ, ಮನುಷ್ಯರಿಗೆ ತೊಂದರೆ ಆಗಲ್ಲ. ನಮ್ಮ ವೈದ್ಯರಿಂದ ವರದಿ ಪಡೆಯುವೆ. ಪಶು ಚಿಕಿತ್ಸಾ ಕೇಂದ್ರಗಳಿಗೆ ನಾಯಿಗಳನ್ನು ಕರೆ ತಂದರೆ ಅಲ್ಲೇ ಚುಚ್ಚುಮದ್ದು ನೀಡಲಾಗುವುದು. ಯಾವುದಾದರೂ ಸಂಘ-ಸಂಸ್ಥೆಗಳು, ಸ್ವಯಂ ಸೇವಕರು ನಾಯಿಗಳನ್ನು ಕರೆ ತಂದರೆ ಅನುಕೂಲವಾಗುತ್ತದೆ. -ಡಾ| ಶಿವಣ್ಣ, ಪಶು ಇಲಾಖೆ, ಜಂಟಿ ನಿರ್ದೇಶಕ

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next