ಹಾವೇರಿ: ಯಾವ ರಾಜ್ಯದಲ್ಲಿ ಚುನಾವಣೆ ಪ್ರಾರಂಭ ಆಗುತ್ತದೋ, ಆ ರಾಜ್ಯದಲ್ಲಿ ವಿರೋಧ ಪಕ್ಷಗಳ ಮುಖಂಡರ ಮೇಲೆ ದಾಳಿ ನಾಡೆಯುತ್ತವೆ. ಬಿಜೆಪಿ ಸರ್ಕಾರ ಬಂದ ಮೇಲೆ ಇದು ನಡೆದುಕೊಂಡು ಬಂದಿದ್ದು, ಬಿಜೆಪಿಯವರ ಚುನಾವಣೆ ಕ್ರಮವೇ ಅದು. ಗುಜರಾತ್ ಘಟನೆ ನೈಜ ಚಿತ್ರಣ ಮಾಡಿದರು ಅಂತ ಹೇಳಿ ಬಿಬಿಸಿಯವರನ್ನೇ ಬಿಡಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ರಾಣೆಬೆನ್ನೂರು ತಾಲೂಕು ಹಲಗೇರಿ ಗ್ರಾಮದಲ್ಲಿ ಮಾತನಾಡಿ, ವಿರೋಧ ಪಕ್ಷಗಳ ಮುಖಂಡರ ಮೇಲೆ ಐಟಿ ರೈಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಇನ್ನೂ ಮೂರು ತಿಂಗಳು ನಡೆಯುತ್ತದೆ. ಎಷ್ಟೆ ಚರ್ಚೆ ಮಾಡಿದರೂ ಅಷ್ಟೆ. ಲೋಕಸಭೆ ಚುನಾವಣೆಯಲ್ಲಿಯೂ ಇದೇ ಕೆಲಸ ಮಾಡಿದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ರೈಡು,ಗೀಡು ಏನು ಮಾಡುತ್ತಾರೋ ಮಾಡಿಕೊಂಡು ಹೋಗಲಿ. ಬಿಜೆಪಿಯವರು ಮಹಾನ್ ಹರಿಶ್ಚಂದ್ರರು. ಬಿಜೆಪಿಯವರು ಚುನಾವಣೆಗೆ ದುಡ್ಡೇ ಖರ್ಚು ಮಾಡಲ್ಲ, ಬಡತನದಲ್ಲಿ ಚುನಾವಣೆ ಮಾಡುತ್ತಾರೆ. ಬಿಜೆಪಿಯವರು ಕೈ ಮುಗಿದುಕೊಂಡು ಹೋಗಿ ಚುನಾವಣೆ ನಡೆಸುತ್ತಾರೆ ಎಂದು ಕಿಡಿ ಕಾರಿದರು.
ನರೇಂದ್ರ ಮೋದಿಯವರ ಮುಖ ನೋಡಿ ಜನ ವೋಟು ಹಾಕುವ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದರಲ್ಲಿ ಆಶ್ಚರ್ಯ ಏನು ಇಲ್ಲ, ಏನು ಚರ್ಚೆ ಮಾಡಿದರೂ ಅಷ್ಟೆ. ಏನೂ ಮಾಡೋಕಾಗುವುದಿಲ್ಲ, ಸಹಿಸಿಕೊಳ್ಳಬೇಕು ಎಂದರು.
ಗೂಳಿಹಟ್ಟಿ ಶೇಖರ್ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ,ಬಿಜೆಪಿ ಶಾಸಕನೇ ಟೆಂಡರ್ ಪ್ರೊಸೆಸ್ ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿದೆ ಅಂತ ಚರ್ಚೆ ಮಾಡಿದ ಮೇಲೆ ಈ ಸರ್ಕಾರದ ಮೇಲೆ ಏನು ಚರ್ಚೆ ಮಾಡ್ತೀರಿ? ಅಸೆಂಬ್ಲಿಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು ಇದೆ. ಸಿದ್ದರಾಮಯ್ಯ ದಾಖಲೆ ಇಡಿ ಅಂತಾರೆ. ಏನು ದಾಖಲೆ ಇಡೋದು? ಕಮಿಷನ್ ತಗೊಂಡಿರೋದಕ್ಕೆ ದಾಖಲೆ ಇಡೋಕಾಗುತ್ತಾ?ಕಮಿಷನ್ ಏನು ವೈಟ್ ಆಂಡ್ ವೈಟ್ ತಗೊಂಡಿದಾರಾ?ಎಲ್ಲಾ ಬ್ಲಾಕ್ ಮನಿ ತಗೊತಾರೆ. ದಾಖಲೆ ಎಲ್ಲಿ ಇಡೋಕಾಗುತ್ತೆ? ವರ್ಗಾವಣೆಗೆ ಸಂಬಂಧಿಸಿದಂತೆ ಸ್ಯಾಂಟ್ರೋ ರವಿ ಅರೆಸ್ಟ್ ಮಾಡಿದ್ರಲ್ಲಾ? ವಿಡಿಯೋಗಳು ಬಂದವಲ್ವಾ?ಅದಕ್ಕಿಂತ ದಾಖಕೆ ಬೇಕಾ ಭ್ರಷ್ಟಾಚಾರದ ಬಗ್ಗೆ ಎಂದು ಕಿಡಿ ಕಾರಿದರು.
ಅಂತಿಮವಾಗಿ ಜನತಾ ನ್ಯಾಯಾಲಯ ಇದೆ. ಮುಂದಿನ ಚುನಾವಣೆಯಲ್ಲಿ ಜನರೇ ತೀರ್ಪು ಕೊಡಬೇಕು ಅಷ್ಟೆ. ನಾನು ಬಿಜೆಪಿ ಕಾಂಗ್ರೆಸ್ ನವರಿಗೆ ಟಾರ್ಗೆಟ್ ಆಗಿದ್ದು, ಪಂಚರತ್ನ ಯಾತ್ರೆ ವೇಗ ಎರಡೂ ಪಕ್ಷಗಳಿಗೆ ಅರಿಗಿಸಿಕೊಳ್ಳಲು ಆಗುತ್ತಿಲ್ಲ. ಹೇಗೆ ಕಟ್ಟಿ ಹಾಕಬೇಕು ಅಂತ ತಲೆ ಕೆಡಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಸಂಖ್ಯೆ ಹೇಗೆ ಕಡಿಮೆ ಮಾಡಬೇಕು ಅಂತ ತಲೆ ಕೆಡಿಸಿಕೊಂಡಿದ್ದಾರೆ.ಎರಡೂ ಪಕ್ಷಗಳ ಬಗ್ಗೆ ಜನರಿಗೆ ಭ್ರಮ ನಿರಸ ಆಗಿದೆ. ರಾಜಕೀಯ ಬ್ರಹ್ಮಾಸ್ತ್ರ ನಮ್ಮ ಮೇಲೆ ಬಿಟ್ಟರೂ ಜನತಾ ದಳ ತೆಗೆಯೋಕೆ ಆಗುವುದಿಲ್ಲ ಎಂದರು.
ರಮ್ಯ ಅಥವಾ ನಟ ಸುದೀಪ್ ಚನ್ನಪಟ್ಟಣದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮ್ಯಾ ನನ್ನ ಸಹೋದರಿ ಸಮಾನ, ನನ್ನ ವಿರುದ್ದ ನಿಲ್ಲಬೇಕು ಅಂತ ಇದ್ದರೆ ನಿಲ್ಲಬಹುದು. ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ನಿಲ್ಲಬೆಡಿ ಅಂತ ಹೇಳೋಕೆ ಆಗುವುದಿಲ್ಲ. ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ನಿನ್ನೆ ನವಲಗುಂದದ ಹೆಬಸೂರು ಗ್ರಾಮ ವಾಸ್ತವ್ಯ ಮಾಡಿದ್ದೆ. ಸಿಎಂ ಜಿಲ್ಲೆ ಹೇಗಿದೆ ಅಂತ ರಾಜ್ಯಪಾಲರಿಂದ ಭಾಷಣ ಮಾಡಿಸಿಕೊಂಡಿದ್ದಾರೆ. ಸ್ಪೈನಲ್ ಕಾರ್ಡ್ ಡ್ಯಾಮೇಜ್ ಆದ ಒಬ್ಬ ಯುವಕ ಮನೆ ಮಠ ಮಾರಿಕೊಂಡಿದ್ದಾನೆ. 15 ವರ್ಷದಲ್ಲಿ ಆ ಕುಟುಂಬ ಬೀದಿಗೆ ಬಂದಿದೆ.
ಹಾವೇರಿ ತಾಲೂಕು ಸಂಗೂರು ಗ್ರಾಮದ ಯುವಕ ಊಟಕ್ಕೆ ಗತಿ ಇಲ್ಲ ಅಂದ. ನಾನು ಸಿಎಂ ಇದ್ದಾಗ ಯಾಕೆ ಬರಲಿಲ್ಲ ಎಂದೆ? ನಮಗೆ ಗೊತ್ತಾಗಲಿಲ್ಲ ಅಂತ ಹೇಳಿದರು. ಹಾವೇರಿ ಜಿಲ್ಲೆಯಲ್ಲಿ ಆರೋಗ್ಯದ ಸಮಸ್ಯೆಯಿಂದ ಹಲವಾರು ಜನ ಬರ್ತಾರೆ. ನಾನು ಪಟ್ಟಿಯನ್ನೇ ಕೊಡಬಲ್ಲೆ,ಸಂಗೂರು ಗ್ರಾಮದ ಯುವಕನಿಗೆ 25,000 ಕೊಟ್ಟಿದ್ದೇನೆ. ಎಲ್ಲಾ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದೇನೆ ಎಂದರು.
ನಾವು ಯಾವ ಗೊಂದಲ ಮಾಡಿಲ್ಲ. ನಾಳೆ ವಿಧಾನಸಭೆಯಲ್ಲಿ ಮಾತಾಡುತ್ತೇನೆ. ರಾಜ್ಯ ಪಾಲರ ಭಾಷಣದ ಮೇಲೆ ಮಾತನಾಡುತ್ತೇನೆ ಎಂದರು.