ವಿವರಗಳಲ್ಲಿ ನೀವು ಕಂಡ, ಕೇಳಿದ ಅಥವಾ ಅನುಭವಿಸಿದ ಪ್ರಸಂಗವೂ ಇರಬಹುದೇನೋ…
Advertisement
“ಬದುಕಲ್ಲಿ ದುಡ್ಡು ಮುಖ್ಯ ಮಗನೇ. ಮನುಷ್ಯನಿಗೆ ದುಡ್ಡಿದ್ದಾಗ ಮಾತ್ರ ಬೆಲೆ. ಇವತ್ತಿನ ಥರಾನೇ ನಾಳೆ ಇರಲ್ಲ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ದುಡ್ಡು ಉಳಿಸಬೇಕು. ಸಂಬಂಧ, ಸೆಂಟಿಮೆಂಟ್ ಅಂತೆಲ್ಲ ನೋಡಿಕೊಂಡು ದುಂದುವೆಚ್ಚ ಮಾಡಲೇಬಾರದು. ಕಡಿಮೆ ಖರ್ಚಿನಲ್ಲೇ ಅಡ್ಜಸ್ಟ್ ಮಾಡಿಕೊಂಡು ಬದುಕಲು ಕಲಿಯಬೇಕು’- ಬಾಲ್ಯದಿಂದಲೂ ಇಂಥದೇ ಬುದ್ಧಿಮಾತು ಹೇಳಿಕೊಟ್ಟು “ಆತ’ ಮಗನನ್ನು ಬೆಳೆಸಿದ. ಕಾಲಚಕ್ರ ಉರುಳಿತು. ಈ ತಂದೆ ಮುದುಕನಾದ. ಎದ್ದು ಓಡಾಡುವುದೂ ಕಷ್ಟ ಎಂಬಂಥ ಸ್ಥಿತಿಗೆ ತಲುಪಿದ. ಬೇರೊಂದು ಊರಲ್ಲಿದ್ದ ಮಗ ಹುಟ್ಟೂರಿಗೆ ಬಂದವನೇ, ಅತೀ ಕಡಿಮೆ ಸೌಲಭ್ಯಗಳಿದ್ದ ವೃದ್ಧಾಶ್ರಮಕ್ಕೆ ತಂದೆಯನ್ನು ಸೇರಿಸಿ ಹೇಳಿದ: “ಕಷ್ಟನೋ ಸುಖಾನೋ, ಇಲ್ಲೇ ಅಡ್ಜಸ್ಟ್ ಮಾಡಿಕೊಂಡು ಇದ್ದುಬಿಡಪ್ಪಾ… ಬೇರೆ ಕಡೆಗೆ ಹೋದ್ರೆ ಸುಮ್ಮನೆ ಬಣ್ಣದ ಮಾತಾಡಿ ಜಾಸ್ತಿ ಫೀಸ್ ಕೇಳ್ತಾರೆ! ಈ ವಯಸ್ಸಲ್ಲಿ ನಿನಗೆ ಏನು ಅನುಕೂಲ ಮಾಡಿಕೊಟ್ಟು ಏನು ಪ್ರಯೋಜನ?’
Related Articles
Advertisement
– ಗಂಡನ ಮನೆಯಲ್ಲಿ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ರಂಗಣ್ಣನಿಗೆ ಬೇರೊಬ್ಬರಿಂದ ಗೊತ್ತಾಯಿತು. ಒಮ್ಮೆ ಅಳಿಯನ ಮನೆಗೆ ಹೋದರೆ, ಮಗಳನ್ನು ನೋಡಿದಂತೆಯೂ ಆಗುತ್ತದೆ, ವಾಸ್ತವವನ್ನು ಅರಿತಂತೆಯೂ ಆಗುತ್ತದೆ ಎಂದುಕೊಂಡೇ ಹೊರಟ. ಗಂಡನ ಮನೆಯಲ್ಲಿ ಮಗಳು ಕತ್ತೆಯಂತೆ ದುಡಿಯುತ್ತಿದ್ದಾಳೆ. ದಿನವೂ ಕಣ್ಣೀರು ಹಾಕುತ್ತಾಳೆ ಎಂಬುದು ಒಂದೇ ದಿನದಲ್ಲಿ ಅವನಿಗೆ ಗೊತ್ತಾಗಿ ಹಿಂದಿರುಗಿದ. ತನ್ನ ಮಾವನಿಗೆ ಅಳಿಯ ಫೋನ್ ಮಾಡಿ ಹೇಳಿದ: “ಇಷ್ಟು ದಿನ, ನಾನು ಮಾಡಿದ ತಪ್ಪು ನನಗೆ ಅರಿವಾಗಿರಲಿಲ್ಲ. ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳದೆ ನಿಮಗೆ ನೋವುಂಟು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ…’
– ಆ ಮಗುವನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಪೂರ್ತಿ 9 ತಿಂಗಳು ಆಕೆ ಅಲೆದಾಡಿದಳು. ಉಹೂಂ, ಅದು ಭಾರ ಅನ್ನಿಸಲಿಲ್ಲ. ಅದೇ ಮಗು ಪೋಲಿಯೋಗೆ ತುತ್ತಾದಾಗ, ಪೂರ್ತಿ 13 ವರ್ಷಗಳ ಕಾಲ ಅವನ್ನು ಹೊತ್ತುಕೊಂಡೇ ಬದುಕಬೇಕಾಯಿತು. ಉಹೂಂ, ಆಗಲೂ ಅದು ಹೊರೆ ಅನ್ನಿಸಲಿಲ್ಲ. ಈಗ ಅದೇ ಮಗು ಮಾತಿಲ್ಲದೆ ಮಲಗಿಬಿಟ್ಟಿದೆ. ಮನೆಯಿಂದ ಅರ್ಧ ಫರ್ಲಾಂಗ್ ದೂರವಿರುವ ಜಮೀನಿನ ಬಳಿಗೆ ಮಗುವನ್ನು ಹೊತ್ತೂಯ್ಯಲು ಅವಳಿಗೀಗ ಶಕ್ತಿ ಇಲ್ಲ…
– ಅದೊಂದು ದಿನ, ಇದ್ದಕ್ಕಿದ್ದಂತೆಯೇ ಅವಳನ್ನು ಕೆಲಸದಿಂದ ತೆಗೆಯಲಾಯಿತು. ಅವಳು ತಾಳ್ಮೆ ಕಳೆದುಕೊಳ್ಳಲಿಲ್ಲ. ಮುಂದೊಂದು ದಿನ ಅವಳ ಮದುವೆ ಮುರಿದುಬಿತ್ತು. ಅದಕ್ಕಾಗಿ ಆಕೆ ದುಃಖೀಸಲಿಲ್ಲ. ಎಷ್ಟೋ ವರ್ಷಗಳ ಅನಂತರ, ಮಕ್ಕಳೆಲ್ಲ ಆಕೆಯಿಂದ ದೂರವಾದರು. ಈ ಬೆಳವಣಿಗೆಯ ಅನಂತರ ಅವಳು ಡಿಪ್ರಶನ್‌ಗೆ ತುತ್ತಾಗಲಿಲ್ಲ. ಅಂಥ ಹೆಂಗಸು, ಹಾಸಿಗೆ ಹಿಡಿದಿದ್ದ ತಾಯಿ ತೀರಿಕೊಂಡ ತತ್‌ಕ್ಷಣ- “ಅಯ್ಯೋ, ನನಗೆ ಇನ್ಯಾರು ದಿಕ್ಕು?’ ಎಂದು ಗೋಳಾಡುತ್ತಾ ಕುಸಿದುಬಿದ್ದಳು…
– ಅಮ್ಮಾ, ಇವತ್ತು ನೀನು ಮಾತಾಡಬೇಡ. ಸುಮ್ಮನೇ ಇದ್ದುಬಿಡು. ಇವತ್ತು ನಾನೇ ಮಾತಾಡ್ತೇನೆ… ಮಗಳು ತಾಯಿಗೆ ಹೀಗೊಂದು ಸಲಹೆ ಕೊಟ್ಟಳು. ಅದು ಅಮ್ಮನಿಗೂ ಒಪ್ಪಿಗೆ ಆಯಿತು. ರಾತ್ರಿ ತಂದೆ ಬಂದಾಗ ಈ ಮಗಳು ಬೇಡಿಕೆಯ ದನಿಯಲ್ಲಿ ಹೇಳಿದಳು: “ಅಪ್ಪಾ, ಇನ್ನು ಮೇಲಾದ್ರೂ ಕುಡಿಯೋದನ್ನು ನಿಲ್ಲಿಸಿ. ಇದರಿಂದ ನಿಮ್ಮ ಆರೋಗ್ಯ ಹಾಳಾಗುವುದಷ್ಟೇ ಅಲ್ಲ, ಅಮ್ಮನ ಮರ್ಯಾದೆಯೂ ಹೋಗುತ್ತೆ…’ ಹೀಗೆ ಮಾತಾಡಿದ್ದರಿಂದ ಒಂದು ಬದಲಾವಣೆ ಆಯಿತು. ಈ ಬಾರಿ, ತಾಯಿಯ ಜತೆಗೆ ಅವಳೂ ಪೆಟ್ಟು ತಿನ್ನುವಂತಾಯಿತು!
– ಅವಳಿಗೆ ಅವನ ಬಗ್ಗೆ ಪ್ರೀತಿಯಿತ್ತು, ಅಭಿಮಾನವಿತ್ತು. ನಂಬಿಕೆಯಿತ್ತು. ಹಾಗಾಗಿಯೇ ಅವನು ಹೇಳಿದಂತೆಯೇ ಕೇಳುತ್ತ ಬಂದಳು. ತನ್ನದೆಲ್ಲವನ್ನೂ ಅವನಿಗೆ ಅರ್ಪಿಸಿಕೊಂಡಳು. ಕಡೆ ಗೊಂದು ದಿನ- “ಹೀಗೇ ಎಷ್ಟು ದಿನ ಬದುಕೋದು? ಆದಷ್ಟು ಬೇಗ ಮದುವೆ ಆಗೋಣವಾ?’-ಎಂದು ಆಸೆಯಿಂದ ಕೇಳಿದಳು.”ಏನಂದೆ, ಮದುವೇನಾ? ನನ್ನ ಜತೆ ಆಟಕ್ಕೆ ಬಂದವರನ್ನೆಲ್ಲ ನಾನು ಮದುವೆ ಆಗೋಕೆ ಆಗುತ್ತಾ?’– ಅವನು ಅಸಹನೆಯಿಂದ ಪ್ರಶ್ನಿಸಿದ. – ಆಕೆ ಅವಿವಾಹಿತೆ. ಬಂಧು- ಬಳಗದಿಂದ ದೂರವೇ ಇದ್ದಳು. 50ನೇ ಹುಟ್ಟುಹಬ್ಬ ಆಚರಿಸಿಕೊಂಡ ಅನಂತರವೂ ಅವಳು ಮೇಕ್ ಅಪ್ ಮಾಡಿಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ದಿನವೂ ಹುಬ್ಬು ತೀಡಿಕೊಳ್ಳುತ್ತಾ, ಕೂದಲಿಗೆ ಹೇರ್ ಡೈ ಮಾಡುತ್ತಾ, ಮೊಡವೆಯಾಗಲಿ- ಚರ್ಮದ ಸುಕ್ಕಾಗಲಿ ಕಾಣದಂತೆ ಎಚ್ಚರ ವಹಿಸುತ್ತಿದ್ದಳು. ಇಷ್ಟಾದ ಮೇಲೆ ಘಮಘಮ ಅನ್ನುವಂಥ ಸ್ನೋ-ಪೌಡರ್ ಹಾಕಿಕೊಳ್ಳುತ್ತಿದ್ದಳು. ಅನಂತರ ಲಿಪ್‌ಸ್ಟಿಕ್ ಹಚ್ಚಿಕೊಂಡು ರೆಡಿ ಆಗುವ ವೇಳೆಗೆ ಪೂರ್ತಿ ಒಂದು ಗಂಟೆ ಹಿಡಿಯುತ್ತಿತ್ತು. ಇದನ್ನೆಲ್ಲ ನೋಡುವಷ್ಟು ದಿನ ನೋಡಿದ ಅವಳ ಗೆಳತಿಯರು ಕಡೆಗೊಂದು ದಿನ ಕೇಳಿಯೇ ಬಿಟ್ಟರು: “ಅಲ್ಲ ಕಣೇ, ಗಂಡ-ಮಕ್ಕಳು-ಬಂಧುಗಳು ಯಾರೂ ಇಲ್ಲ ಅಂತೀಯಾ. ಹಾಗಿದ್ರೂ ಇಷ್ಟೆಲ್ಲ ಅಲಂಕಾರ ಮಾಡ್ಕೊತೀಯ. ಇದನ್ನೆಲ್ಲ ಯಾರು ನೋಡಬೇಕು? ನಿನ್ನನ್ನು ಯಾರು ಮೆಚ್ಕೋಬೇಕು?’ಆಕೆ ತತ್‌ಕ್ಷಣ ಹೇಳಿದಳು. ಬೇರೆಯವರು ಮೆಚ್ಚಲಿ ಬಿಡಲಿ. ನನ್ನನ್ನು ನಾನು ಮೆಚ್ಕೋಬೇಕು…ಅಷ್ಟೇ… – ಆ ದುರುಳರು, ನಿರ್ಜನ ಪ್ರದೇಶಕ್ಕೆ ಆ ಬಾಲೆಯನ್ನು ಹೊತ್ತೂಯ್ದರು. ಅಲ್ಲಿ ಸರದಿಯ ಪ್ರಕಾರ ತಮ್ಮ ಕಾಮ ತೃಷೆ ತೀರಿಸಿಕೊಂಡರು. ದುಷ್ಟರ ರಕ್ಕಸ ಹಿಡಿತಕ್ಕೆ ಸಿಕ್ಕಿಬಿದ್ದ ಆಕೆಗೆ ಚೀತ್ಕರಿಸುವುದು ಹಾಗಿರಲಿ; ಸರಿಯಾಗಿ ಉಸಿರಾಡಲೂ ಸಾಧ್ಯವಾಗಲಿಲ್ಲ. ದುಷ್ಟರ ಅಟ್ಟಹಾಸದ ಮಧ್ಯೆಯೇ ಆಕೆ ಉಸಿರು ಚೆಲ್ಲಿದಳು. ಇದನ್ನೆಲ್ಲ ಆಗಸದಲ್ಲಿ ಅದೃಶ್ಯವಾಗಿದ್ದುಕೊಂಡೇ ನೋಡಿದ ದೇವತೆಗಳಿಗೆ ದುಃಖ ತಡೆಯಲಾಗಲಿಲ್ಲ. ಅವತ್ತು, ರಾತ್ರಿಯಿಡೀ ಮಳೆ ಸುರಿಯಿತು! – ಆ ನೀಚನನ್ನು ಮರೆಯಬೇಕೆಂದು ತೀರ್ಮಾನಿಸಿದ ಅವಳು, ಅವನ ಫೋನ್ ನಂಬರನ್ನು ಬ್ಲಾಕ್ ಮಾಡಿದಳು. ಅವನ ಮೇಲ್‌ಗಳನ್ನೆಲ್ಲ ಡಿಲೀಟ್ ಮಾಡಿದಳು. ಸೋಶಿಯಲ್ ಮೀಡಿಯಾದಿಂದ ತಾನೇ ಆಚೆಗೆ ಬಂದಳು. ಆದರೆ, ಕನ್ನಡಿಯ ಮುಂದೆ ಹೋಗಿ ನಿಂತರೆ ಸಾಕು; ತನ್ನ ವಿಕಾರವಾದ ಮುಖ ಕಾಣಿಸಿದಾಗಲೇ, ರಾಕ್ಷಸನಂತೆ ಮೇಲೆರಗಿದ್ದ ಆ ದುಷ್ಟನ ಮುಖವೂ ಕಾಣಿಸಿಬಿಡುತ್ತಿತ್ತು… – ಆಕೆ ದಿವಾನ್‌ನ ಮೇಲೆ ನಿಶ್ಚಲವಾಗಿ ಮಲಗಿದ್ದಳು. ದಿವಾನ್‌ನ ಸುತ್ತಲೂ ಬಂಧುಗಳು ಪೆಚ್ಚು ಮೊರೆ ಹಾಕಿಕೊಂಡು ನಿಂತಿದ್ದರು. ಅವರ ಜತೆಯಲ್ಲೇ, ಆಕೆಯ ಗಂಡನೂ ಇದ್ದ. ಆತನ ಕಣ್ಣುಗಳು ಊದಿಕೊಂಡಿದ್ದವು. ಅಲ್ಲಿಯೇ ಇದ್ದ ಅವನ ನಾಲ್ಕು ವರ್ಷದ ಪುಟ್ಟ ಮಗ- “ಅಪ್ಪಾ, ಬೇಗ ಬ್ಯಾಟರಿ ಚೇಂಜ್ ಮಾಡಪ್ಪ, ಬ್ಯಾಟರಿ ಚೇಂಜ್ ಮಾಡಪ್ಪ ಬೇಗ…’ ಎಂದು ಒಂದೇ ಸಮನೆ ಪೀಡಿಸತೊಡಗಿದ್ದ. ನೋಡುವಷ್ಟು ನೋಡಿದ ಆ ತಂದೆ ಕಡೆಗೊಮ್ಮೆ ತಾಳ್ಮೆ ಕಳೆದುಕೊಂಡು- ಅಯ್ಯೋ ದರಿದ್ರ ನನ್ಮಗನೇ, ಸಮಯ ಸಂದರ್ಭ ಗೊತ್ತಿಲ್ಲದೇ ಅದೇನ್ ಮಾತು ನಿಂದು, ತೊಲಗು ಅತ್ಲಾಗೆ…ಎಂದು ಅಬ್ಬರಿಸಿಬಿಟ್ಟ. ಆ ಮಗು ಕಣ್ಣೀರು ಹಾಕುತ್ತಲೇ ಹೇಳಿತು: “”ಅಪ್ಪಾ, ನಮ್ಮ ಬಾಡಿ ಕೂಡ ಒಂದು ಮಷೀನ್ ಥರಾನೇ ಕೆಲಸ ಮಾಡುತ್ತೆ ಅಂತ ನೀನೇ ಹೇಳಿದ್ದೆ ಆಲ್ವಾ? ಬ್ಯಾಟರಿ ಖಾಲಿಯಾಗಿ ಓಡುತ್ತಿದ್ದ ಕಾರ್ ನಿಂತುಬಿಟ್ಟಾಗ, ಹೊಸಾ ಬ್ಯಾಟರಿ ಹಾಕಿ ಕಾರ್‌ನ ಮತ್ತೆ ಓಡುವ ಹಾಗೆ ಮಾಡ್ತಾ ಇದ್ದೆ ಅಲ್ವ? ಅಮ್ಮನ ಬಾಡಿಗೂ ಈಗ ಒಂದು ಹೊಸ ಬ್ಯಾಟರಿ ಹಾಕಿ ಅವಳು ಎದ್ದೇಳುವ ಹಾಗೆ ಮಾಡು ಅಂತ ಹೇಳ್ತಾ ಇದ್ದೀನಿ ಕಣಪ್ಪಾ…’ – ಆ ವೈದ್ಯರು ಯಾತನೆಯ ಧ್ವನಿಯಲ್ಲಿ ಹೇಳಿದರು: “ಹೀಗೆ ಹೇಳುವುದಕ್ಕೆ ವಿಷಾದವಾಗುತ್ತೆ. ಆದರೆ ಹೇಳದೇ ವಿಧಿಯಿಲ್ಲ. ನಿಮಗೆ ಏಡ್ಸ್ ಇದೆ…’ “ಅಬ್ಟಾ, ಇನ್ನು ಮುಂದೆ ಯಾವ ಹುಡುಗರೂ ನನ್ನ ತಂಟೆಗೆ ಬರಲ್ಲ. ಬದುಕಿರುವಷ್ಟು ದಿನ ನಾನು ಯಾವ ಭಯವೂ ಇಲ್ಲದೆ ಬಾಳಬಹುದು’- ಆ ಯುವತಿ ಸಂಭ್ರಮದಿಂದ ಉದ್ಗರಿಸುತ್ತಾ ಎದ್ದು ಹೋದಳು. ಎ.ಆರ್.ಮಣಿಕಾಂತ್