Advertisement
ಬಿ.ಎ. ಮುಗಿದ ಮೇಲೆ ಮನೆಯಲ್ಲಿ ಸತತ ವರಾನ್ವೇಷಣೆ ನಡೆಯುತ್ತಿತ್ತು. ಒಮ್ಮೊಮ್ಮೆ ಅದು ಮನಸ್ಸಿನ ನೆಮ್ಮದಿ ಕೆಡಿಸುತ್ತಿತ್ತು. ಹೀಗಿರುವಾಗ ಊರಿನಲ್ಲೇ ಇದ್ದ ನೆಂಟಸ್ತನ ಬಂದಾಗ ನನಗೂ ಸಂತೋಷವೇ ಆಯಿತು. ಆದರೆ, ವಧು ನೊಡಲು ಬರುವುದುಸಮಸ್ಯೆ ಆಗಿತ್ತು. ಏಕೆಂದರೆ, ಅವರು ಒಪ್ಪದಿದ್ದರೆ ಅಕ್ಕಪಕ್ಕದ ಮನೆಯವರಿಗೆ ತಿಳಿದರೆ ಅವಮಾನ. ಹೀಗಾಗಿ ಗುಪ್ತವಾಗಿ
ನೋಡಬೇಕು ಎಂದುಕೊಂಡು ಮಧ್ಯಸ್ತಿಕೆ ನಡೆಸಿಕೊಡುವವರು ಗುಟ್ಟಲ್ಲಿ ಮನೆಯವರಿಗೆ ತಿಳಿಸಿದ್ದರಂತೆ. ಆಗ ನಾನು ಮನೆಯಲ್ಲಿ ಇರಲಿಲ್ಲ.
ಸಂತೋಷ ವ್ಯಕ್ತಪಡಿಸುವುದನ್ನು ಕೇಳಿ ನಾನು ಹೊರಗಡೆ ಬಂದು ಕಿವಿಗೊಟ್ಟು ಅವರ ಮಾತು ಕೇಳಿದೆ. ಏನೂ ತಿಳಿಯಲಿಲ್ಲ. ಅಮ್ಮ ಬಂದು, “ಹುಡುಗನ ಮನೆಯವರು ನಿನ್ನನ್ನು ಒಪ್ಪಿದ್ದಾರೆ ಕಣಮ್ಮಾ…’ ಎಂದಾಗ ನಾನು, “ಏನು ಹೇಳ್ತಿದ್ದೀಯ? ಕನಸು ಬಿದ್ದಿದೆಯಾ? ಯಾವ ಹುಡುಗ?’ ಎಂದು ಕೇಳಿದೆ. ಆಗ ಅಮ್ಮ, “ನಿನಗೆ ಗೊತ್ತಿದ್ದರೆ ತಾನೇ? ಮಧ್ಯಸ್ತಿಕೆ ವಹಿಸಿದ್ದ ಶ್ರೀಪಾದ, ಹುಡುಗನ ಮನೆಯವರನ್ನು ಕರೆದುಕೊಂಡು ಮಾರ್ಕೆಟ್‌ಗೆ ಬಂದು, ಹುಡುಗನ ಮನೆಯವರಿಗೆ ದೂರದಿಂದಲೇ ನಿನ್ನನ್ನು ತೋರಿಸಿದನಂತೆ. ನೀನು ಸೇಬು ವ್ಯಾಪಾರ ಮಾಡಿದ ರೀತಿ ನೋಡಿ, ಅವರ ಮನೆಗೆ ಸರಿಯಾದ ಹೆಣ್ಣು ಎಂದುಕೊಂಡರಂತೆ. ಈಗ ಅವರೇ ಫೋನು ಮಾಡಿದ್ದರು’ ಎಂದರು. ಓಹೋ, ಅವರೇ ನನ್ನನ್ನು ಹಾಗೆ ದಿಟ್ಟಿಸಿ ನೋಡುತ್ತಿದ್ದವರು ಎಂದುಕೊಂಡೆ. ಆದರೂ, ಹುಡುಗನ ಕಡೆಯವರಿಗೆ ಕಾಫಿ ಕೊಡುವುದು ತಪ್ಪಿತಲ್ಲ ಅಂತ ಬೇಜಾರಾಯಿತು. ಹೀರಾ ರಮಾನಂದ್