ಬೆಂಗಳೂರು: ಹಾನಗಲ್ ನಲ್ಲಿ ಶ್ರೀನಿವಾಸ್ ಮಾನೆ ತಮ್ಮ ವೈಯಕ್ತಿಕ ವರ್ಚಸ್ಸಿಂದ ಗೆದ್ದಿದ್ದಾರೆ. ಅದು ಮಾನೆ ಗೆಲುವು, ಕಾಂಗ್ರೆಸ್ ಗೆಲುವಲ್ಲ ಎಂದು ಸಚಿವ ಸೋಮಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಗಲ್ ನಲ್ಲಿ ನಮಗೆ ಸೋಲಾಗಿದೆ. ಉದಾಸಿಯವರಿಗೆ ಅನಾರೋಗ್ಯವಾಗಿತ್ತು, ಕ್ಷೇತ್ರ ಕಡೆ ಸ್ವಲ್ಪ ಗಮನ ಕೊಡಕ್ಕಾಗಿರಲಿಲ್ಲ. ಹಾನಗಲ್ ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ. ನಾವು ಎರಡೂ ಕ್ಷೇತ್ರ ಗೆಲ್ಲುವ ನಿರೀಕ್ಷೆ ಇತ್ತು, ಆದರೆ ಒಂದು ಸೋತಿದೀವಿ. ಜನ ಪ್ರಚಲಿತ ವಿಚಾರಗಳನ್ನು ಗಮನಿಸಿ ಮತ ನೀಡಿಲ್ಲ. ಸಿಂದಗಿಯಲ್ಲಿ ಅಭಿವೃದ್ಧಿಗೆ ಮತ ಕೇಳಿದ್ದೆವು. ನಾವು ತಂಡವಾಗಿ ಕೆಲಸ ಮಾಡಿದ್ದೇವೆ ಎಂದರು.
ಸಿಂದಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ ನಿರ್ಧಾರ ಮಾಡಿದ್ದಾರೆ. ಜನಕ್ಕೆ ಅಭಿವೃದ್ಧಿ ಬೇಕು. ಅಭಿವೃದ್ಧಿ ಮನಸ್ಸಿನಲ್ಲಿಟ್ಟು ಸಿಂದಗಿ ಜನ ಅಭೂತಪೂರ್ವ ತೀರ್ಪು ಕೊಟ್ಟಿದ್ದಾರೆ. ನವೆಂಬರ್ 8 ರಂದು ನಾವು ಸಿಂದಗಿಗೆ ಹೋಗುತ್ತೇವೆ. ಅಲ್ಲಿನ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಹಾನಗಲ್ ನಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗುತ್ತೆ ಎಂದು ನಿರೀಕ್ಷಿಸಿರಲಿಲ್ಲ : ಯಡಿಯೂರಪ್ಪ
ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸಿದ್ದೆವು. ಯಡಿಯೂರಪ್ಪ ಸಹ ಮೂರು ದಿನ ಅಲ್ಲೇ ಇದ್ದರು. ಸೋಲು ಗೆಲುವು ಯಾರದ್ದು ಅಂತಲ್ಲ, ಮಾನೆ ಕೋವಿಡ್ ಸಮಯದಲ್ಲಿ ಜನರಿಗೆ ಉಪಕಾರ ಮಾಡಿದ್ದರು. ಹೀಗಾಗಿ ಜನ ಉಪಕಾರ ಸ್ಮರಿಸಿ ಮಾನೆ ಗೆಲ್ಲಿಸಿದ್ದಾರೆ. ಉದಾಸಿಯವರ ಆರೋಗ್ಯ ಕ್ಷೀಣಿಸಿದ್ದರಿಂದ ಕೋವಿಡ್ ವೇಳೆ ಓಡಾಡಕ್ಕೆ ಆಗಿರಲಿಲ್ಲ. ಹಾನಗಲ್ ನಲ್ಲಿ ನಮಗೆ ಕಳೆದ ಸಲ ಬಂದಿದ್ದ ಮತಗಳು ಬಂದಿವೆ. ನಮ್ಮ ಮತ ಎಲ್ಲೂ ಹೋಗಿಲ್ಲ ಎಂದರು.