ಹಾಸನ: ಹೊಳೆನರಸೀಪುರ ತಾಲೂಕಿನ ಯುವತಿಯೊಬ್ಬಳನ್ನು ಮದುವೆ ಆಗುವುದಾಗಿ ನಂಬಿಸಿ ಯುವಕನೊಬ್ಬ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತನಗೆ ಪೋಷಕರು ನಿಗದಿ ಪಡಿಸಿದಿದ್ದ ಮದುವೆಯನ್ನೂ ಮುರಿದು ಈಗ ಮೋಸ ಮಾಡಿರುವವನಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು ಎಂದು ಯುವತಿ ಪಟ್ಟು ಹಿಡಿದಿದ್ದಾಳೆ.
ನೊಂದ ಯುವತಿ ಹೊಳೆನರಸೀಪುರ ತಾಲೂಕಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ಓದುತ್ತಿದ್ದು, ಯುವತಿ ಓದುತ್ತಿರುವುದಾಗಲೇ ಮನೆಯವರು ಆಕೆಯ ಅತ್ತೆಯ ಮಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಆದರೆ, ಯುವತಿ ಊರಿನವನೇ ಆದ ಕಾರು ಚಾಲಕ ಆದಿತ್ಯ ಎಂಬಾತ ಕಳೆದ ಮೂರು ವರ್ಷದಿಂದ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಬಲವಂತವಾಗಿ ದೈಹಿಕ ಸಂಪರ್ಕ: ಕಾಲೇಜಿಗೆ ಹೋಗುವಾಗಲೂ ಆಕೆಯ ಬೆನ್ನು ಬಿದ್ದು ಪ್ರೀತಿಸು ಎಂದು ಬಲವಂತ ಮಾಡುತ್ತಿದ್ದ. ಮದುವೆ ಒಂದೆರೆಡು ದಿನಗಳಿರುವಾಗ ಯುವತಿಯ ಮನೆ ಮುಂದೆ ಬಂದು ಕರೆ ಮಾಡಿ ಆಕೆಯನ್ನು ಹೊರಗೆ ಕರೆಸಿಕೊಂಡು ಕಾರಿನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೋಗಿ ನಿಮಿಷಾಂಬ ದೇವಸ್ಥಾನದ ಎದುರಿದ್ದ ಲಾಡ್ಜ್ನಲ್ಲಿ ಮದುವೆಯಾಗುವೆ ಎಂದು ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ ಎಂದು ಯುವತಿ ದೂರುತ್ತಿದ್ದಾಳೆ.
ತಾಳಿ ಕಟ್ಟಿ ಮೋಸ: ಅದಾದ ಮರುದಿನ ನಿಮಿಷಾಂಬ ದೇವಾಲಯದಲ್ಲಿ ತಾಳಿ ಕಟ್ಟಿದ. ಅದಾದ ನಂತರ ಮೈಸೂರಿಗೆ ಬಂದು ಅಲ್ಲೂ ಕೂಡ ದೈಹಿಕವಾಗಿ ನನ್ನನ್ನು ಬಳಸಿಕೊಂಡಿದ್ದಾನೆ. ಈ ನಡುವೆ ನನಗೆ ಮದುವೆ ನಿಶ್ಚಯವಾಗಿದ್ದ ಅತ್ತೆ ಮಗ ಹಾಗೂ ನಾನು ತೆಗೆಸಿಕೊಂಡಿದ್ದ ಪ್ರೀ ವೆಡ್ಡಿಂಗ್ ಫೋಟೋಗಳನ್ನು ಅತ್ತೆ ಮಗನ ಸಹೋದರ, ಆದಿತ್ಯನಿಗೆ ವಾಟ್ಸ್‌ಆ್ಯಪ್ ಮೂಲಕ ಶೇರ್ ಮಾಡಿದ್ದ. ಇಷ್ಟಕ್ಕೇ ನೀನು ನನಗೆ ಬೇಡ ಎಂದ ಆದಿತ್ಯ, ಕಟ್ಟಿದ್ದ ತಾಳಿಯನ್ನೂ ಬಿಚ್ಚಿಕೊಂಡು, ನನ್ನನ್ನು ಬೈದು ಮನೆಗೆ ಬಿಟ್ಟು ಹೋಗಿದ್ದಾನೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ.
ಆನಂತರ ನಾನು ಹೊಳೆನರಸೀಪುರ ನಗರಠಾಣೆಗೆ ದೂರು ನೀಡಿದೆ. ಅದಾದ ಬಳಿಕವೂ ಮತ್ತೂಮ್ಮೆ ರಿಜಿಸ್ಟ್ರಾರ್ ಮದುವೆ ಆಗೋಣ ಎಂದು ಆದಿತ್ಯ ಹೇಳಿ, ತನ್ನ ಸ್ನೇಹಿತನ ಮನೆಯಲ್ಲಿ ಇರಿಸಿದ್ದ. ಆದರೆ, ಆದಿತ್ಯನ ಅಣ್ಣ ಅಭಿಷೇಕ್, ಅತ್ತಿಗೆ ಕೀರ್ತನಾ, ತಂದೆ ಮಂಜುನಾಥ್, ಅಮ್ಮ ಮಂಜುಳಾ, ಚಿಕ್ಕಪ್ಪನ ಮಕ್ಕಳಾದ ಶಶಿಕುಮಾರ್, ಹರ್ಷ ಎಂಬುವರು ಯುವತಿಯನ್ನು ಮನೆಗೆ ಕರೆದುಕೊಡು ಬಂದರೆ ಮರ್ಯಾದೆ ಹಾಳಾಗಲಿದೆ ಎಂದು ಆದಿತ್ಯನಿಗೆ ಹೆದರಿಸಿ ಅವರ ಮನೆಗೆ ಕಳಿಸಿ ಬಿಡು, ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಪಂಚಾಯ್ತಿ ನಡೆಸಿದ್ರೂ ಪ್ರಯೋಜನವಿಲ್ಲ: ಮನೆಯವರ ವಿರೋಧದ ನಡುವೆಯೂ ನನ್ನನ್ನು ಮತ್ತೆ ಮೈಸೂರಿಗೆ ಕರೆದುಕೊಂಡು ಹೋದ ಆದಿತ್ಯ, ಮೇಟಗಹಳ್ಳಿಯಲ್ಲಿ ಪಿಜಿಗೆ ಸೇರಿಸಿದ. ನಂತರ ವಕೀಲರ ಕಚೇರಿಗೆ ಕರೆದುಕೊಂಡು ಹೋಗಿ ಮದುವೆ ಆಗಿಲ್ಲ ಎಂದು ಅಗ್ರಿಮೆಂಟ್‌ಗೆ ಸಹಿ ಹಾಕಿಸಿಕೊಂಡಿದ್ದಾನೆ. ಪಂಚಾಯತಿ ನಡೆಸಿದ ನಂತರವೂ ಆದಿತ್ಯ ನನಗೆ ಮೋಸ ಮಾಡಿದ್ದಾನೆ. ಹಾಗಾಗಿ ಆದಿತ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾಳೆ.