Advertisement

ಸುಳ್ಳು ದಾಖಲೆ ನೀಡಿ ಐಟಿ ರಿಟರ್ನ್ಸ್: ಸಿಎ ಸೆರೆ

08:35 AM Jan 26, 2018 | Team Udayavani |

ಬೆಂಗಳೂರು: ಸುಳ್ಳು ದಾಖಲೆ ನೀಡಿ ಬೃಹತ್‌ ಕಂಪನಿಗಳ ಉದ್ಯೋಗಿಗಳ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡುತ್ತಿದ್ದ ಬೆಂಗಳೂರಿನ ಚಾರ್ಟರ್ಡ್‌ ಅಕೌಂಟೆಂಟ್‌ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಒಬ್ಬರನ್ನು ಬಂಧಿಸಿದೆ. ಸುಳ್ಳು ದಾಖಲೆಗಳನ್ನು
ಆದಾಯ ತೆರಿಗೆ ಇಲಾಖೆಗಳಿಗೆ ಸಲ್ಲಿಸಿ, ಕಡಿತಗೊಂಡ ಆದಾಯ ತೆರಿಗೆಯ ರಿಫ‌ಂಡ್‌ಗಳನ್ನು ಕಂಪನಿ ಉದ್ಯೋಗಿಗಳಿಗೆ ಒದಗಿಸುವ
ಚಾರ್ಟರ್ಡ್‌ ಅಕೌಂಟೆಂಟ್‌ಗಳ ಜಾಲವೇ ಇದೆ ಎಂದು ಆದಾಯ ತೆರಿಗೆ ಇಲಾಖೆ ಶಂಕಿಸಿದೆ. ಆದಾಯ ತೆರಿಗೆ ಇಲಾಖೆ ದಾಳಿ  ನಡೆಸಿದಾಗ ಸಿಎ ಕಚೇರಿಯಲ್ಲಿ ಹಲವು ಬೋಗಸ್‌ ದಾಖಲೆಗಳು ಸಿಕ್ಕಿವೆ. ಅಷ್ಟೇ ಅಲ್ಲ, ಇದಕ್ಕೆ ಪೂರಕವಾಗಿ ವಾಟ್ಸ್‌ಆ್ಯಪ್‌ ಚಾಟ್‌ ಸಂದೇಶ ಕೂಡ ಲಭ್ಯವಾಗಿವೆ.

Advertisement

50ಕ್ಕೂ ಹೆಚ್ಚು ಕಂಪನಿಗಳು ಈ ಸಿಎ ಕ್ಲೈಂಟ್‌ಗಳಾಗಿದ್ದು, ಈಗಾಗಲೇ ಸಾವಿರಾರು ರಿಟರ್ನ್ಸ್ ಅನ್ನು ಸುಳ್ಳು ದಾಖಲೆ ನೀಡಿ ಈತ ಸಲ್ಲಿಸಿದ್ದಾನೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಚಾರ್ಟರ್ಡ್‌ ಅಕೌಂಟೆಂಟ್‌ನ ಹೆಸರು ಮತ್ತಿತರ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿಲ್ಲ. 

ಹೇಗೆ ನಡೀತಿತ್ತು ಮೋಸ?: ಕಂಪನಿಯ ಉದ್ಯೋಗಿಗಳಿಗೆ ಕಡಿತಗೊಂಡ ಆದಾಯ ತೆರಿಗೆಯನ್ನು ವಾಪಸ್‌ ಪಡೆಯಲು, ಮನೆ ಸ್ವತ್ತಿನಲ್ಲಿ ನಷ್ಟವಾಗಿದೆ ಎಂದು ಸಿಎ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ರಿಫ‌ಂಡ್‌ ಮೊತ್ತದ ಮೇಲೆ ಶೇ. 10ರಷ್ಟು ಕಮಿಷನ್‌ ಪಡೆಯುತ್ತಿದ್ದ. ಸ್ವತ್ತಿನಲ್ಲಿ ನಷ್ಟವಾಗಿದೆ ಎಂಬ ಕಾರಣವೊಂದನ್ನೇ ನೀಡಿ 1000 ಕ್ಲೇಮ್‌ ಮಾಡಿದ್ದು, ಇದರಿಂದ 18 ಕೋಟಿ ರೂ. ರಿಫ‌ಂಡ್‌ ಪಡೆಯಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಒಂದೇ ಚಾರ್ಟರ್ಡ್‌ ಅಕೌಂಟೆಂಟ್‌ನಿಂದ ಒಂದೇ
ರೀತಿಯ ಹಲವು ಕ್ಲೇಮ್‌ಗಳು ಬಂದಾಗ ಆದಾಯ ತೆರಿಗೆ ಇಲಾಖೆ ಎಚ್ಚೆತ್ತುಕೊಂಡಿತು. ಈ ಚಾರ್ಟರ್ಡ್‌ ಅಕೌಂಟೆಂಟ್‌
ನ ಕ್ಲೈಂಟ್‌ಗಳನ್ನು, ಅಂದರೆ ಸಿಎ ಮೂಲಕ ಐಟಿ ರಿಟರ್ನ್ಸ್ ಸಲ್ಲಿಸಿದ ವಿವಿಧ ಕಂಪನಿಯ ಉದ್ಯೋಗಿಗಳನ್ನು ಸಂಪರ್ಕಿಸಿದಾಗ ಸ್ವತ್ತಿನಲ್ಲಿ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ತಾನು ಹೇಗಾದರೂ ದಾಖಲೆ ಮೂಲಕ ರಿಫ‌ಂಡ್‌ ಕೊಡಿಸುತ್ತೇನೆ ಎಂದಿದ್ದ ಎಂದು ಉದ್ಯೋಗಿಗಳು ಹೇಳಿದ್ದಾರೆ. ಸಿಎ ಕಚೇರಿಯ ಮೇಲೆ ದಾಳಿ  ನಡೆಸಿದ ನಂತರದಲ್ಲಿ ಹಲವು ಉದ್ಯೋಗಿಗಳನ್ನು ಸಂಪರ್ಕಿಸಲಾಗುತ್ತಿದೆ ಎಂದು ಐಟಿ ಇಲಾಖೆ ವಿವರಿಸಿದೆ. ಆದರೆ ಸ್ವತ್ತಿನಲ್ಲಿ ನಷ್ಟದ ದಾಖಲೆ ಸೃಷ್ಟಿಸಿ ರಿಟರ್ನ್ಸ್
ಸಲ್ಲಿಸುವಂತೆ ಉದ್ಯೋಗಿಗಳೇ ನನಗೆ ಹೇಳಿದ್ದರು ಎಂದು ಸಿಎ ಹೇಳಿದ್ದಾರೆ. ಆದರೆ ಉದ್ಯೋಗಿಗಳ ಜತೆಗಿನ ವಾಟ್ಸ್‌ಆ್ಯಪ್‌ ಸಂಭಾಷಣೆಯು ಐಟಿ ಇಲಾಖೆಗೆ ಲಭ್ಯವಾಗಿದೆ. ಜೊತೆಗೆ ಹಲವು ದಾಖಲೆಗಳನ್ನೂ ಐಟಿ ಇಲಾಖೆ ವಶಪಡಿಸಿಕೊಂಡಿದೆ.

ಯಾವ ಕಂಪನಿಗಳ ಉದ್ಯೋಗಿಗಳು?
ಐಬಿಎಂ
ವೊಡಾಫೋನ್‌
ಸ್ಯಾಪ್‌ಲ್ಯಾಬ್ಸ್
ಬಯೋಕಾನ್‌
ಇನ್ಫೋಸಿಸ್‌
ಐಸಿಐಸಿಐ ಬ್ಯಾಂಕ್‌
ಸಿಸ್ಕೋ
ಥಾಮ್ಸನ್‌ ರಾಯrರ್ಸ್‌

Advertisement

Udayavani is now on Telegram. Click here to join our channel and stay updated with the latest news.

Next