Advertisement

ಸಚಿವ ರೇವಣ್ಣ ಆಪ್ತರ ಮೇಲೆ ಐಟಿ ದಾಳಿ

09:49 AM Apr 17, 2019 | Team Udayavani |

ಹಾಸನ: ಕರ್ನಾಟಕದಲ್ಲಿ ಪ್ರಥಮ ಹಂತದ ಲೋಕಸಭಾ ಚುನಾವಣೆಗೆ ಕೇವಲ ಎರಡು ದಿನಗಳು ಬಾಕಿ ಉಳಿದಿರುವಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯೂ ಜೋರಾಗಿದೆ. ಇನ್ನು ಮಂಗಳವಾರದಂದು ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿರುವುದರಿಂದ ಆ ಬಳಿಕ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹಣ-ಹೆಂಡ ಮತ್ತು ಇತರೇ ಆಮಿಷಗಳನ್ನು ಒಡ್ಡುವ ಸಾಧ್ಯತೆಗಳಿರುವುದಿಂದ ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ಆಪ್ತರ ಚಲನವಲನಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಹದ್ದಿನ ಕಣ್ಣಿಟ್ಟಿದೆ.

Advertisement

ಇದಕ್ಕೆ ಪೂರಕವಾಗಿ ಇಂದು ಬೆಳಿಗ್ಗೆ ಹಾಸನ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಚಿವ ಹೆಚ್‌.ಡಿ. ರೇವಣ್ಣ ಅವರ ಮೂವರು ಆಪ್ತರ ನಿವಾಸ, ಕಚೇರಿ ಸೇರಿದಂತೆ ಪೆಟ್ರೋಲ್‌ ಬಂಕ್‌ ಹಾಗೂ ಮರದ ಮಿಲ್‌ ಗಳಿಗೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ 8 ಜನ ಅಧಿಕಾರಿಗಳಿದ್ದ ತಂಡ ಅಲ್ಲೆಲ್ಲಾ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿವೆ.

ರೇವಣ್ಣ ಅವರ ಆಪ್ತ ಕಾರ್ಲೆ ಇಂದ್ರೇಶ್‌ ಅವರ ಫ್ಯಾಕ್ಟರಿ ಹಾಗೂ ಗೆಸ್ಟ್‌ ಹೌಸ್‌ ಮೇಲೆ ದಾಳಿ ನಡೆದಿದೆ. ಎರಡು ಕಾರುಗಳಲ್ಲಿ ಬಂದ ಅಧಿಕಾರಿಗಳು ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಲೆ ಇಂದ್ರೇಶ್‌ ಅವರ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ.

ಇನ್ನು ಹೊಳೇನರಸೀಪುರದ ಹರದನಹಳ್ಳಿಯಲ್ಲಿರುವ ಪಾಪಣ್ಣಿ ಅವರ ಮನೆಯಲ್ಲೂ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಇನ್ನು ಜೆಡೆಎಸ್‌ ಜಿಲ್ಲಾ ಪಂಚಾಯತ್‌ ಸದಸ್ಯ ತಿಪ್ಪೇಗೌಡ ಅವರ ಮನೆಯ ಮೇಲೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಧನಪರಿಷತ್‌ ಸದಸ್ಯ ಪಟೇಲ್‌ ಶಿವರಾಂ ಅವರ ಮನೆಯ ಮೇಲೂ ಆದಾಯ ತೆರಿಗೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next