ವಿಧಾನ ಪರಿಷತ್: ಸರ್ಕಾರಿ ಕಂದಾಯ ಭೂಮಿಯಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳ ಸಕ್ರಮಕ್ಕೆ ಅವಕಾಶ ಕಲ್ಪಿಸಿರುವ 94 ಸಿ ಹಾಗೂ 94ಸಿಸಿ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಕ್ರಮವಾಗಿ ಫೆ.21 ಹಾಗೂ ಫೆ.22ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಲಾಗಿದ್ದು, ಶುಲ್ಕ ಮೊತ್ತದಲ್ಲಿ ಅರ್ಧ ಇಳಿಕೆ ಮಾಡಲಾಗಿದೆ. ಕಾಲಾವಕಾಶ ಮುಗಿದ ಬಳಿಕ ಪರಿಶೀಲಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು’ ಎಂದು ಹೇಳಿದರು.
ಶ್ರೀನಿವಾಸ ಪೂಜಾರಿ ಅವರು, ಉಡುಪಿ ಜಿಲ್ಲೆಯಲ್ಲಿ 25,000 ಅರ್ಜಿದಾರರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 50,000ಕ್ಕೂ ಹೆಚ್ಚು ಬಡವರು 94ಸಿ ಅಡಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಯಾವುದೇ ಪ್ರಗತಿಯಾಗಿಲ್ಲ. ಹಕ್ಕುಪತ್ರದ ದರ ಪರಿಷ್ಕರಿಸುವ ಬಗ್ಗೆ ಸದನದಲ್ಲಿ ಭರವಸೆ ನೀಡಿದರೂ ಆದೇಶ ಜಾರಿಯಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
94 ಸಿ ಮತ್ತು 94ಸಿಸಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಬಡವರ ಕಡತಗಳನ್ನು ಡೀಮ್ಡ್ ಅರಣ್ಯ ಕಾರಣ ನೀಡಿ ವಿಲೇವಾರಿ ಮಾಡುತ್ತಿಲ್ಲ ಇಲ್ಲವೇ ತಿರಸ್ಕರಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 34,000 ಹೆಕ್ಟೇರ್ ಭೂಮಿ ಡೀಮ್ಡ್ ಅರಣ್ಯದಿಂದ ವಿರಹಿತಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಆದರೆ ಸಿಎನ್‌ಡಿ ಜಾಗ, ಗೋಮಾಳ, ಗೇರು ಲೀಸ್, ಸಿ.ಆರ್.ಜಡ್, ಕುಮ್ಕಿ ಪ್ರದೇಶದಲ್ಲಿ ನೆಲೆಸಿರುವ ಮಂದಿಗೆ ಹಕ್ಕುಪತ್ರ ನೀಡಲು ಗೊಂದಲ ಉಂಟಾಗುತ್ತಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.