ಬೆಂಗಳೂರು: ಕ್ಷೇತ್ರದ ವಿಚಾರದ ಬಗ್ಗೆ ಮಾತನಾಡಲು ನಾನು ಉಪ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದು ನಿಜ. ನಾನೇನು ಕದ್ದುಮುಚ್ಚಿ ಭೇಟಿಯಾದದ್ದಲ್ಲ. ಈ ವಿಚಾರವನ್ನು ಶಿವಕುಮಾರ್ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಮಾಜಿ ಸಚಿವ ಮುನಿರತ್ನ ಹೇಳಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಾನು ರಾಜಕೀಯ ನಿವೃತ್ತಿ ಬೇಕಾದರೂ ಪಡೆದೇನು. ಆದರೆ ಮರಳಿ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಮ್ಮ ಜತೆ ಬಂದವರು ಯಾರೂ ಹೋಗುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರು ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳವ ಅಗತ್ಯವಿಲ್ಲ. ಅವರು ನನ್ನ ಸ್ಪಷ್ಟನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಉತ್ತರ ಕೊಡುತ್ತಾರಾ? ಅಥವಾ ಬೆಂಗಳೂರು ನಗರದ ಉಸ್ತುವಾರಿಯಾಗಿ ಉತ್ತರ ಕೊಡುತ್ತಾರಾ ಎಂಬುದನ್ನು ಮೊದಲು ಹೇಳಲಿ. ಬಿಜೆಪಿ ಶಾಸಕರಿಗೆ ಅನುದಾನ ಕೊಡುವುದನ್ನು ಇತ್ಯರ್ಥ ಮಾಡುವುದಕ್ಕೆ ಮುನ್ನ ಕಾಂಗ್ರೆಸ್‌ನ 12 ಜನರು ಬೆಂಗಳೂರಿನಲ್ಲಿ ಗೆದ್ದಿದ್ದಾರೆ. ಅವರಿಗೆ ಅನುದಾನ ನೀಡಲಿ ಎಂದು ಸವಾಲು ಹಾಕಿದರು.
ಎಸ್.ಟಿ.ಸೋಮಶೇಖರ್‌ಗೆ ಶಿವಕುಮಾರ್ ರಾಜಕೀಯ ಗುರುವಾಗಿರಬಹುದು. ನನಗೆ ರಾಜಕೀಯ ಗುರು ಬಿ.ಕೆ. ಹರಿಪ್ರಸಾದ್. ಕೇವಲ ರಾಜಕೀಯ ಗುರು ಮಾತ್ರ ಅಲ್ಲ. ನನಗೆ ಎಲ್ಲವೂ ಬಿ.ಕೆ.ಹರಿಪ್ರಸಾದ್ ಅವರೇ ಎಂದರು. ಕಾಂಗ್ರೆಸ್ ಸರಕಾರ ಬಂದ ಬಳಿಕ ರಾಜರಾಜೇಶ್ವರಿ ನಗರ ಹಾಗೂ ಮಲ್ಲೇಶ್ವರಂ ಕ್ಷೇತ್ರಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದರಲ್ಲಿ ಅನುಮಾನ ಇಲ್ಲ. ಶಿವಕುಮಾರ್ ಡಿಸಿಎಂ ಆದ ಬಳಿಕ 14 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಾಜರಾಜೇಶ್ವರಿನಗರ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಜೈಲಿಗೆ ಹೋಗುವುದಕ್ಕೂ ಸಿದ್ಧ ಎಂದು ಮುನಿರತ್ನ ತಿರುಗೇಟು ನೀಡಿದರು.