Advertisement

ಇದು ರಾಜಧಾನಿಯ ಪುಷ್ಪಕ ವಿಮಾನ

11:58 AM Jun 18, 2017 | Team Udayavani |

ಬೆಂಗಳೂರು: ಪುಷ್ಪಕ ವಿಮಾನದಲ್ಲಿ ಹೋದಂತೆ ಆಗುತ್ತಿದೆ. ಇಷ್ಟು ವರ್ಷ ಕಾದಿದ್ದಕ್ಕೂ ಸಾರ್ಥಕ ಎನಿಸುತ್ತಿದೆ. ಟ್ರಾಫಿಕ್‌, ಹೊಗೆ, ಧೂಳಿನ ಕಿರಿಕಿರಿ ಇಲ್ಲ. ಮಗಳ ಮನೆಗೆ ಇನ್ಮುಂದೆ ಮೆಟ್ರೋದಲ್ಲೇ ಹೋಗಿ-ಬರುತ್ತೇನೆ… ಶನಿವಾರ ಸಂಜೆ ಉದ್ಘಾಟನೆಗೊಂಡ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಹಿರಿಯ ನಾಗರಿಕರಾದ ಎಸ್‌.ವಿ.ಎಸ್‌. ರಾವ್‌ ಅವರ ಮನದಿಂಗಿತವಿದು. 

Advertisement

ರಾವ್‌ 1952ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಲ್ಲೇಶ್ವರದಲ್ಲಿ ಮನೆ ಇದ್ದು, ಅವರ ಪುತ್ರಿ ನಾಯಂಡಹಳ್ಳಿಯಲ್ಲಿದ್ದಾರೆ. ಈ ಹಿಂದೆ ಮಗಳನ್ನು ಭೇಟಿಯಾಗಲು ಮೆಜೆಸ್ಟಿಕ್‌ಗೆ ಬಸ್‌ನಲ್ಲಿ ಬಂದು, ಅಲ್ಲಿಂದ ನಾಯಂಡಹಳ್ಳಿಗೆ ತೆರಳುತ್ತಿದ್ದರು. ಆದರೀಗ ಮೆಟ್ರೋ ಇದೆ. ಇನ್ನು ಮುಂದೆ ಮಲ್ಲೇಶ್ವರದಿಂದಲೇ ನೇರವಾಗಿ ಮನಗಳ ಮನೆಗೆ ಹೋಗಬಹುದು ಎಂಬ ಖಷಿ ಅವರದ್ದು. ಯಾವುದೇ ಟ್ರಾಫಿಕ್‌ ಕಿರಿಕಿರಿ ಇಲ್ಲ. ಮೆಟ್ರೋದಲ್ಲಿ ಇಷ್ಟು ದೂರ ಪ್ರಯಾಣಿಸುತ್ತಿರುವುದು ಒಂದು ಅದ್ಭುತ ಅನುಭವ ಎಂದು ಅವರು ಸಂತಸ ಹಂಚಿಕೊಂಡರು. 

ಮೆಟ್ರೋ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಮಂತ್ರಿಸ್ಕ್ವೇರ್‌ ನಿಲ್ದಾಣಕ್ಕೆ ಬಂದಿದ್ದೆ. ಆದರೆ, ಗೇಟ್‌ಗೆ ಬೀಗ ಹಾಕಲಾಗಿತ್ತು. ಕುತೂಹಲ ತಡೆಯಲು ಆಗಲಿಲ್ಲ. ಆದ್ದರಿಂದ ಮತ್ತೆ ಸಂಜೆ ಬಂದೆ. ವಿವಿಐಪಿಗಳು ಹೋಗುತ್ತಿದ್ದರು. ಆದದ್ದಾಗಲಿ ಎಂದು ಅವರೊಂದಿಗೆ ಒಳಗೆಬಂದೆ. ಅದೇನೇ ಇರಲಿ, ಇಷ್ಟು ಕಸರತ್ತು ಮಾಡಿದ್ದಕ್ಕೂ ಖುಷಿ ಆಗುತ್ತಿದೆ ಎಂದು ವಿವರಿಸಿದರು. 

ಎರಡನೇ ಹಂತವೂ ಪೂರ್ಣವಾದರೇ…ಆಹಾ ಅದ್ಭುತ!: ಜಯನಗರ ನಿಲ್ದಾಣದಲ್ಲಿ ವಿವಿಐಪಿ ಪಾಸಿನೊಂದಿಗೆ ಮೆಟ್ರೋ ಏರಿದ ಸಾಫ್ಟ್ವೇರ್‌ ಎಂಜಿನಿಯರ್‌ ಸೌಮ್ಯ ಗೋಪಾಲ್‌, “ಮೊದಲ ದಿನವೇ ಮೆಟ್ರೋದಲ್ಲಿ ಹೋಗುತ್ತಿರುವುದಕ್ಕೆ ರೋಮಾಂಚನ ಆಗುತ್ತಿದೆ ಎಂದರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದು ಅತ್ಯಂತ ಖುಷಿಯ ಕ್ಷಣಗಳು ಎಂದು ಅವರು ಸಂಭ್ರಮಿಸಿದರು. 

“ಮಲ್ಲೇಶ್ವರದಲ್ಲಿ ಸಂಬಂಧಿಕರಿದ್ದಾರೆ. ವೀಕೆಂಡ್‌ನ‌ಲ್ಲಿ ಅವರನ್ನು ಭೇಟಿಯಾಗಲು ಹೊರಟುನಿಂತರೆ, ಎರಡೂವರೆ ತಾಸು ಬರೀ ಬಸ್‌ನಲ್ಲೇ ಕಳೆಯಬೇಕಿತ್ತು. ಎರಡು ಬಸ್‌ ಬದಲಿಸಬೇಕಿತ್ತು. ಈಗ ಬರೀ 20ರಿಂದ 25 ನಿಮಿಷಗಳಲ್ಲಿ ತಲುಪಬಹುದು. ನನ್ನ ಕಚೇರಿ ಇರುವುದು ಕೆಂಗೇರಿಯಲ್ಲಿ. ಹಾಗಾಗಿ, ಎರಡನೇ ಹಂತವೂ ಆದಷ್ಟು ಬೇಗ ಪೂರ್ಣಗೊಂಡರೆ, ಮೆಟ್ರೋದಲ್ಲೇ ಆಫೀಸಿಗೆ ಹೋಗಿ-ಬರಬಹುದು’ ಎಂದೂ ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next