Advertisement

ಖಾಸಗಿ ವಿವಿಗಳಿಗೆ ಸರಕಾರದಿಂದಲೇ ಪ್ರಶ್ನೆಪತ್ರಿಕೆ ಪೂರೈಸಲು ಶಿಫಾರಸು

01:01 AM Dec 22, 2022 | Team Udayavani |

ಬೆಳಗಾವಿ: ಖಾಸಗಿ ವಿಶ್ವವಿದ್ಯಾನಿಲಯಗಳು ತಾವೇ ಪರೀಕ್ಷೆ ನಡೆಸಿ ಸರಕಾರಿ ಕಾಲೇಜುಗಳ ಮೇಲೆ ಒತ್ತಡ ಹಾಗೂ ಪ್ರಭಾವ ಬೀರುವುದನ್ನು ತಡೆಯಲು ಸರಕಾರದಿಂದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಖಾಸಗಿ ವಿವಿಗಳಿಗೆ ನೀಡಬೇಕೆಂದು ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

Advertisement

ವಿಧಾನಮಂಡಲದಲ್ಲಿ ಮಂಡಿಸಿದ ಸಮಿತಿಯ 52ನೇ ವರದಿಯಲ್ಲಿ, ಖಾಸಗಿ ವಿವಿಯವರು ತಾವೇ ಪ್ರಶ್ನೆಪತ್ರಿಕೆ ತಯಾರಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಇದರಿಂದಾಗಿ ತಮ್ಮ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯುವುದಕ್ಕೆ ಸಹಕರಿಸಿದಂತಾಗುತ್ತಿದೆ. ಇದರಿಂದಾಗಿ ಸರಕಾರಿ ಕಾಲೇಜುಗಳ ಮೇಲೆ ಒತ್ತಡ ಹೆಚ್ಚುತ್ತಿದ್ದು, ಇದರ ಬಗ್ಗೆ ನಿಯಂತ್ರಣ ಹೇರಬೇಕಿದೆ.

ಹೀಗಾಗಿ ಖಾಸಗಿ ವಿವಿಗಳಿಗೆ ಸರಕಾರವೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ನೀಡಬೇಕು. ಅದರಿಂದ ವಿಶ್ವವಿದ್ಯಾನಿಲಯಗಳು ಸರಕಾರದ ನಿಯಂತ್ರಣದಲ್ಲಿರುವಂತಾಗುತ್ತದೆ. ಅದೇ ರೀತಿ ವಿವಿಗಳಲ್ಲಿ ವಿಷಯವಾರು ಮತ್ತು ವಿಭಾಗವಾರು ನೇಮಕಾತಿಗಳಲ್ಲಿ ಮೀಸಲಾತಿ ಪರಿಗಣಿಸುವುದಕ್ಕಾಗಿ ಕಡ್ಡಾಯವಾಗಿ 371 (ಜೆ) ಮೀಸಲಾತಿ ನಿಯಮ ಅಳವಡಿಸಿಕೊಳ್ಳುವಂತೆ ಖಾಸಗಿ ವಿವಿಗಳಿಗೆ ಸೂಚಿಸುವಂತೆಯೂ ಸಮಿತಿಯು ವರದಿಯಲ್ಲಿ ತಿಳಿಸಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಎಂಎಸ್‌ಐಎಲ್‌ ಮದ್ಯ ಮಳಿಗೆ
ಖಾಸಗಿ ಮದ್ಯಮಳಿಗೆಗಳು ಹೆಚ್ಚಿದಂತೆ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತದೆ. ಹೀಗಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್‌ ಮದ್ಯ ಮಳಿಗೆ ತೆರೆಯಲು ಅವಕಾಶ ನೀಡಬೇಕು. ಜತೆಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಖಾಸಗಿ ಮದ್ಯದಂಗಡಿಗಳಿಗೆ ನಿರ್ಬಂಧ ಹೇರಬೇಕು. ಬೀದಿಬದಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಕಠಿನ ನಿಯಮ ರೂಪಿಸುವಂತೆ ಸಮಿತಿ ಸೂಚಿಸಿದೆ.

ತಹಶೀಲ್ದಾರ್‌ಗಳ ವಿರುದ್ಧ ಕ್ರಮ
ಬಗರ್‌ಹುಕುಂ ಸಮಿತಿಗಳಲ್ಲಿ ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ನಿರ್ದಿಷ್ಟ ಸಮಯ ನಿಗದಿ ಮಾಡಬೇಕು. ಜತೆಗೆ ಬಗರ್‌ಹುಕುಂ ಸಮಿತಿಯ ಅಧ್ಯಕ್ಷರ ಗಮನಕ್ಕೆ ತಾರದೆ ಹೆಚ್ಚಾಗಿ ಜಮೀನು ಮಂಜೂರು ಮಾಡಿರುವ ಹಾಗೂ ನಿಯಮ ಬಾಹಿರವಾಗಿ ಹೆಚ್ಚುವರಿ ಭೂಮಿ ನೀಡಿರುವ ಎಲ್ಲ ತಾಲೂಕುಗಳಿಂದ ಹಿಂಪಡೆಯಬೇಕು. ಒಂದು ವೇಳೆ ಹೆಚ್ಚುವರಿ ಜಮೀನು ಮಂಜೂರು ಮಾಡಿದ್ದರೆ ಅಂತಹ ತಹಶೀಲ್ದಾರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next