ಚಿಂಚೋಳಿ: ತಾಲೂಕಿನಲ್ಲಿ ಎಡೆಬಿಡದೆ ಸುರಿ ಯುತ್ತಿರುವ ಧಾರಾಕಾರ ಮಳೆಯಿಂದ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ವಿದ್ಯುತ್ ಸಂಪರ್ಕ ಮೇಲಿಂದ ಮೇಲೆ ಕಡಿತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ತಾಲೂಕಿನಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದ ಕಾರಣ ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಜಲಾಶಯದಿಂದ ಎರಡು ಗೇಟುಗಳನ್ನು ಮೇಲೆತ್ತಿ 645ಕ್ಯೂಸೆಕ್ ನೀರನ್ನು ಮುಲ್ಲಾಮಾರಿ ನದಿಗೆ ಹರಿಬಿಡಲಾಗಿದೆ ಎಂದು ಯೋಜನೆ ಎಇಇ ಹಣಮಂತ ಪೂಜಾರಿ ತಿಳಿಸಿದ್ದಾರೆ.
ಮುಲ್ಲಾಮಾರಿ ಜಲಾಶಯದಿಂದ ಹರಿದು ಬಂದ ನೀರು ಬ್ಯಾರೇಜ್ ಮೇಲೆ ನೀರು ಹರಿದ ಪರಿಣಾಮವಾಗಿ ಬೆಳಗಿನ ಜಾವ ಹೊಲಗಳಿಗೆ ಹೋಗುವ ರೈತರು ಪರದಾಡುವಂತೆ ಆಗಿತ್ತು. ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಗರಗಪಳ್ಳಿ, ಪೋಲಕಪಳ್ಳಿ ಮುಂತಾದ ಬ್ಯಾರೇಜ್ ಮೇಲೆ ಅಧಿಕ ಪ್ರಮಾಣದ ನೀರು ಹರಿದು ಹೋಗಿದೆ. ತಾಲೂಕಿನ ಕುಂಚಾವರಂ ಅರಣ್ಯ ಭಾಗದಲ್ಲಿ ಬುಧವಾರ ರಾತ್ರಿ 75ಮಿಲಿಮೀಟರ್ ಮಳೆಯಾಗಿದೆ. ಇದರಿಂದಾಗಿ ಶಾದಿಪೂರ, ಧರ್ಮಸಾಗರ, ಸೇರಿಭಿಕನಳ್ಳಿ, ಮಗ್ಧಂ ಪುರ, ಶಿವರೆಡ್ಡಿಪಳ್ಳಿ, ವೆಂಕಟಾಪುರ ಗ್ರಾಮಗಳಲ್ಲಿ ಸಣ್ಣ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಇದರಿಂದಾಗಿ ರಸ್ತೆ, ಸೇತುವೆ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಗ್ರಾಮದ ಸಂಗಮೇಶ ಎನ್ನುವರು ತಿಳಿಸಿದ್ದಾರೆ.
ತಾಲೂಕಿನ ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿದ್ದು, ಕೋಡಿ ಮುಖಾಂತರ ನೀರು ಹರಿಯುತ್ತಿದೆ. ಗುರುವಾರ ಬೆಳಗಿನ ಜಾವದಿಂದಲೇ ಸತತ ಮಳೆ ಸುರಿದಿದ್ದರಿಂದ ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು ಮಳೆಯಲ್ಲೇ ನೆನೆದುಕೊಂಡೇ ಮನೆಗೆ ತೆರಳುವಂತಾಯಿತು. ತಾಲೂಕಿನಲ್ಲಿ ಹೆಸರು ಕಟಾವಿಗೆ ಬಂದಿದ್ದು, ಅನೇಕ ರೈತರು ರಸ್ತೆ ಮೇಲೆ ರಾಶಿ ಮಾಡಿಕೊಳ್ಳುತ್ತಿದ್ದಾರೆ. ಮಳೆ ಆಗಾಗ ಸುರಿಯುತ್ತಿರುವುದರಿಂದ ರಾಶಿ ಮಾಡಲು ರೈತರು ಪರದಾಡುವಂತಾಗಿದೆ.