ಕುಷ್ಟಗಿ: ಮೇಲ್ವರ್ಗ, ಕೆಳ ವರ್ಗ, ಶ್ರೀಮಂತ, ಬಡವ ಎಲ್ಲರಿಗೂ ಸಂವಿಧಾನ ನೀಡಿದ ಮತದಾನ ಒಂದೇ ಆಗಿರುವಾಗ ಮೇಲ್ಜಾತಿ, ಕೆಳಜಾತಿ ಎನ್ನುವ ಭಿನ್ನ ಬೇಧ ಮಾಡುವುದು ಸರಿ ಅಲ್ಲ ಎಂದು ತಹಶೀಲ್ದಾರ ಎಂ.ಸಿದ್ದೇಶ ಹೇಳಿದರು.
ಕುಷ್ಟಗಿ ತಾಲೂಕಿನ ಬೊಮ್ಮನಹಾಳ ಗ್ರಾಮದಲ್ಲಿ ತಾಲೂಕಾಡಳಿತ, ಗ್ರಾ.ಪಂ. ನಿಲೋಗಲ್, ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡ ಅಸ್ಪೃಶ್ಯತೆ ನಿವಾರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ದೃಷ್ಟಿಯಲ್ಲಿ ಸಮಾನರು ಎನ್ನುವ ಭಾವನೆ ಬರಲು ಚುನಾವಣೆಯಲ್ಲಿ ಮತದಾನದ ಮೌಲ್ಯ ಒಂದೇ ಆಗಿದೆ. ಎಲ್ಲರೂ ಸಮಾನರು ಎನ್ನುವ ಭಾವನೆ ಎಲ್ಲರಲ್ಲೂ ಬಂದರೆ ಮಾತ್ರ ಮಾನವೀಯ ಮೌಲ್ಯಕ್ಕೆ ಉಳಿಗಾಲವಿದೆ ಎಂದರು.
ಕುಷ್ಟಗಿ ತಾಲೂಕಿನ ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ಆಚರಣೆಯಿಂದಾಗಿ ತಾಲೂಕಿನಾದ್ಯಂತ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಅಸ್ಪೃಶ್ಯತೆ ನಿವಾರಣೆ ಜಾಗೃತಿ ಕಾರ್ಯಕ್ರಮ ಪ್ರತಿ ಶುಕ್ರವಾರ ಹಮ್ಮಿಕೊಳ್ಳಲಾಗುತ್ತಿದ್ದು ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಹನುಮಸಾಗರ ಪಿಎಸೈ ಅಶೋಕ ಬೇವೂರ, ಸಮಾಜ ಕಲ್ಯಾಣ ಅಧಿಕಾರಿ ಬಾಲಚಂದ್ರ ಸಂಗನಾಳ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀ ಶೈಲ ಸೋಮನಕಟ್ಟಿ, ನೀಲೊಗಲ್ ಗ್ರಾ.ಪಂ.ಅದ್ಯಕ್ಷೆ ಮಂಜುಳಾ ಪಾಟೀಲ , ಎಸ್ಸಿಎಸ್ಟಿ ದೌರ್ಜನ್ಯ ಸಮಿತಿ ಅದ್ಯಕ್ಷ ಚಂದಾಲಿಂಗ ಕಲಾಲಬಂಡಿ ಮತ್ತಿತರರಿದ್ದರು.