ದಾವಣಗೆರೆ: ಶಾಲಾ ಪಠ್ಯಕ್ರಮದಿಂದ ಭಗತ್ ಸಿಂಗ್ ಕುರಿತಾದ ಪಾಠ, ಮಾನವತಾವಾದಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ) ಪದಾಧಿಕಾರಿಗಳು ನಗರದ ರೈಲ್ವೆ ನಿಲ್ದಾಣ ಸಮೀಪದ ಭಗತ್ ಸಿಂಗ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಮಾತನಾಡಿ, 10ನೇ ತರಗತಿ ಪಠ್ಯಪುಸ್ತಕದಿಂದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಹಾಗೂ ವಿವೇಕಾನಂದರ ಮಾನವತಾವಾದಿ ಚಿಂತನೆಗಳನ್ನು ಕೈಬಿಟ್ಟಿರುವ ಸರ್ಕಾರದ ಕೃತ್ಯವು ಅತ್ಯಂತ ನಿರ್ಲಜ್ಜತನದಿಂದ ಕೂಡಿದೆ. ಬಿಜೆಪಿ, ಸಂಘ-ಪರಿವಾರದ ಸರ್ಕಾರಕ್ಕೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ಬಗ್ಗೆ ಕಿಂಚಿತ್ತೂ ಗೌರವವೇ ಇಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರಾ ಅಬೂಬಕರ್ ಅವರ ಯುದ್ಧ, ಎ.ಎನ್. ಮೂರ್ತಿರಾಯರ ವ್ಯಾಘ್ರಗೀತೆ ಮುಂತಾದ ಮೌಲ್ಯಯುತ ಪಾಠಗಳನ್ನು ಕೂಡ ಕೈಬಿಡಲಾಗಿದೆ. ಸಮಾಜದಲ್ಲಿ ಸಾಂಸ್ಕೃತಿಕ ಅಧಃಪತನ ವ್ಯಾಪಕವಾಗಿರುವ ಹೊತ್ತಿನಲ್ಲಿ ಹೆಚ್ಚು ಅವಶ್ಯವಾಗಿರುವ ಚಿಂತನೆಗಳನ್ನು ಕೈಬಿಟ್ಟಿರುವುದು ನಾಗರಿಕತೆಯ ಪ್ರಗತಿಗೆ ವಿರುದ್ಧವಾದುದು ಎಂದು ದೂರಿದರು.
ಎಲ್ಲೆಡೆ ಅಸಮಾನತೆ, ಶೋಷಣೆ ತಾಂಡವವಾಡುತ್ತಿರುವಾಗ ವಿದ್ಯಾರ್ಥಿಗಳಿಗೆ ಭಗತ್ ಸಿಂಗ್ ಅವರ ವಿಚಾರ ದೊರಕಿದರೆ ಎಲ್ಲೆಡೆ ಹೋರಾಟದ ಕಹಳೆ ಮೊಳಗುವುದೆಂಬ ಭಯದಿಂದ ಸರ್ಕಾರ ವಿದ್ಯಾರ್ಥಿಗಳಿಂದ ಭಗತ್ ಸಿಂಗ್ ಅವರನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದೆ ಕೋಮು ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದ ಹೆಗ್ಡೆವಾರ್ ಭಾಷಣವನ್ನು ಪಠ್ಯಕ್ಕೆ ಸೇರಿಸಲಾಗಿದೆ. ಈ ರೀತಿಯ ಸಂಕುಚಿತ ವಿಚಾರಗಳು ಸಮಾಜದ ಸ್ವಾಸ್ಥವನ್ನು ಹಾಳುಗೆಡವುತ್ತವೆ. ಕೂಡಲೇ ಕೈಬಿಟ್ಟಿರುವ ಭಗತ್ ಸಿಂಗ್ ಹಾಗೂ ವಿವೇಕಾನಂದರ ವಿಚಾರಗಳನ್ನು ಪಠ್ಯಕ್ಕೆ ಮರು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಬಿ. ಕಾವ್ಯ, ಜಿ. ಪುಷ್ಪಾ, ಟಿ.ಎಸ್. ಸುಮನ್, ಅಭಿಷೇಕ್, ಧನುಷಾ, ಅನುಪ್ರಜ್ಞಾ ಇತರರು ಇದ್ದರು.