ಬೆಂಗಳೂರು: ಕರ್ನಾಟಕದ ಬಿಜೆಪಿ ವಿಜಯರಥ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಂದ ತಡೆಯಲು ಸಾಧ್ಯವೇ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರಶ್ನಿಸಿದ್ದಾರೆ.
ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಗೋವಾ ಮತ್ತು ಮಣಿಪುರ ಮಾದರಿಯಲ್ಲಿ ಹಿಂದಿಗಿಂತ ಹೆಚ್ಚು ಸ್ಥಾನದೊಂದಿಗೆ ಇಲ್ಲಿ ಅಧಿಕಾರ ನಮ್ಮದಾಗಲಿದೆ ಎಂದು ಹೇಳಿದರು.
ಬಿಜೆಪಿ ಅತ್ಯಂತ ಹೆಚ್ಚು ಸಂಘಟಿತ ಪಕ್ಷ. ಆದ್ದರಿಂದ ನಮಗೆ ರಾಜ್ಯದ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿದೆ ಎಂದು ಅವರು ತಿಳಿಸಿದರು.
ಬಡವರಿಗಾಗಿ, ರೈತರು ಮತ್ತು ಮಹಿಳೆಯರಿಗಾಗಿ ನರೇಂದ್ರ ಮೋದಿ ಅವರು ಗರಿಷ್ಠ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ.
ಹಿಂದಿನ ಆರು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಮಾಡಿದ್ದಕ್ಕಿಂತ ಹೆಚ್ಚು ಅಭಿವೃದ್ಧಿ ಕಾರ್ಯಗಳು ಮೋದಿಜಿ ಅವರ ಅವಧಿಯಲ್ಲಿ ನಡೆದಿವೆ. ರಾಜ್ಯದಲ್ಲೂ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ನಮ್ಮ ಗೆಲುವಿಗೆ ಪೂರಕ ಎಂದರು.
ಭಾರತ್ ಜೋಡೋ ಯಾತ್ರೆಯಲ್ಲಿ ದೇಶವಿರೋಧಿ ಶಕ್ತಿಗಳು ಕೈ ಜೋಡಿಸಿವೆ. ಪಾಕಿಸ್ತಾನ್ ಜಿಂದಾಬಾದ್ ಕೂಗುವವರು ಅವರ ಜೊತೆಗಿದ್ದಾರೆ. ಕಾಂಗ್ರೆಸ್ ಪಕ್ಷವು ತುಷ್ಟೀಕರಣ ನೀತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಆಕ್ಷೇಪಿಸಿದರು.