Advertisement

ಡಾಮರು ಕಾಮಗಾರಿ ನಡೆದು ಎರಡು ವರ್ಷಗಳಲ್ಲಿ ನಡೆದಾಡಲೂ ಕಷ್ಟ

12:09 PM Aug 24, 2018 | |

ಕಾಣಿಯೂರು : ಸುಳ್ಯ ತಾಲೂಕಿನ ಎಡಮಂಗಲ ಗ್ರಾಮದ ರಸ್ತೆಗಳೆಲ್ಲವೂ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿವೆ. ಇದರಿಂದ ಸ್ಥಳೀಯರು ರೋಸಿ ಹೋಗಿದ್ದಾರೆ. ಅಲೆಕ್ಕಾಡಿ ಕಡಬ ರಸ್ತೆಯ ಅಲೆಕ್ಕಾಡಿ ಎಂಬಲ್ಲಿಂದ ಪುಳಿಕುಕ್ಕು ತನಕದ ಸುಮಾರು 8 ಕಿ.ಮೀ. ರಸ್ತೆಯ ಡಾಮರು ಕಿತ್ತುಹೋಗಿದ್ದು, ಕರಿಂಬಿಲ ಎಂಬಲ್ಲಿ ತೋಡಿನಂತಾಗಿದೆ. ವಿದ್ಯಾ ರ್ಥಿಗಳು, ವಾಹನ ಚಾಲಕರು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ಓಡಾಟ ದುಸ್ತರವಾಗಿದೆ.

Advertisement

ಜಿ.ಪಂ. ರಸ್ತೆ
ಇದು ಜಿಲ್ಲಾ ಪಂಚಾಯಿತಿ ರಸ್ತೆ. ಎರಡು ವರ್ಷಗಳ ಹಿಂದೆಯೇ ಡಾಮರು ಕಾಮಗಾರಿ ನಿರ್ವಹಿಸಲಾಗಿತ್ತು. ಆದರೆ, ಈಗ ರಸ್ತೆಯ ಮಧ್ಯೆ ಅಲ್ಲಲ್ಲಿ ಇಂಗು ಗುಂಡಿಯಂತಹ ಹೊಂಡಗಳು ಸೃಷ್ಟಿಯಾಗಿವೆ. ರಸ್ತೆಯಿಡೀ ಕೆಸರಾಗಿದ್ದು, ಪೂರ್ತಿ ಹಾನಿಗೀಡಾಗಿದೆ. ಹೊಸಮಠ ಸೇತುವೆ ಹಾಗೂ ಪುಳಿಕುಕ್ಕು -ಪಂಜ ನಡುವೆ ಇರುವ ಕೋಂಟೆಲ್‌ಸಾರ್‌ ಎಂಬಲ್ಲಿಯ ಸೇತುವೆಗಳು ಮುಳುಗಡೆಯಾದರೆ ಕಡಬದವರು ಪುತ್ತೂರನ್ನು ಸಂಪರ್ಕಿಸಲು ಅಲೆಕ್ಕಾಡಿ ರಸ್ತೆಯನ್ನೇ ಅವಲಂಬಿಸುವುದು ಅನಿವಾರ್ಯ.

ಮೇಲ್ದರ್ಜೆಗೇರಿಸಿ
ಕಾಣಿಯೂರು, ಪುಣ್ಚಿತ್ತಾರು, ಬೆಳ್ಳಾರೆ, ನಿಂತಿಕಲ್ಲು ಭಾಗದ ಜನರು ಕಡಬ ಸಂಪರ್ಕಿಸಲು ಇದೇ ರಸ್ತೆಯನ್ನು ಅವಲಂಭಿಸಿದ್ದು, ನಿತ್ಯ ಸಾವಿರಾರು ವಾಹನಗಳು ಇಲ್ಲಿ ಓಡಾಟ ನಡೆಸುತ್ತಿವೆ. 3.5 ಮೀ. ಅಗಲವಿರುವ ಈ ರಸ್ತೆಯನ್ನು ಇನ್ನಷ್ಟು ವಿಸ್ತರಿಸುವುದು ಅಗತ್ಯ. ಹೀಗಾಗಿ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹ ಕೇಳಿಬರುತ್ತಿದೆ.

ಅಲೆಕ್ಕಾಡಿ ನೂಜಾಡಿ ರಸ್ತೆಯಲ್ಲೂ ಗೋಳು
ನೂಜಾಡಿ ಕಾಲನಿಯಲ್ಲಿ ಗ್ರಾಮ ಪಂಚಾಯತ್‌ ರಸ್ತೆ ಪಾಡು ಇದೇ ಆಗಿದೆ. 150 ಮೀ. ರಸ್ತೆ ಕಾಂಕ್ರೀಟ್‌ ಕಂಡಿದ್ದರೂ, ಉಳಿದ 400 ಮೀಟರ್‌ ರಸ್ತೆ ತೀರಾ ಹದಗೆಟ್ಟು ಶಾಲಾ ಮಕ್ಕಳು ನಡೆದಾಡಲೂ ಕಷ್ಟಕರವಾಗಿ ಪರಿಣಮಿಸಿದೆ. ಸುಮಾರು 70 ಮನೆಗಳಿವೆ. ಅಲೆಕ್ಕಾಡಿ ನೂಜಾಡಿ ರಸ್ತೆ ದುಸ್ಥಿತಿ ಕಂಡು ನಾಗರಾಜ್‌ ರಾವ್‌ ಆಲಾಜೆ, ಶಿವಕುಮಾರ್‌ ನೂಜಾಡಿ, ಗಂಗಾಧರ ನೂಜಾಡಿ, ಸುರೇಶ್‌ ನೂಜಾಡಿ, ಸತೀಶ ನೂಜಾಡಿ, ಮಹಮ್ಮದ್‌ ನೂಜಾಡಿ, ಶೀನಪ್ಪ ನೂಜಾಡಿ, ಮೇದಪ್ಪ ಕೊಳಂಬಳ ಅವರು ಶ್ರಮದಾನ ಮೂಲಕ ರಸ್ತೆ ಸರಿಪಡಿಸಿದರು. ಕಲ್ಲು, ಮರಳು ತಂದು ರಸ್ತೆಗೆ ಸುರಿದು ತಕ್ಕಮಟ್ಟಿಗೆ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿದರು.

ಮನವಿಗಿಲ್ಲ ಬೆಲೆ
ರಸ್ತೆ ಅಭಿವೃದ್ಧಿಪಡಿಸುವಂತೆ ಹಲವಾರು ಬಾರಿ ಜನಪ್ರತಿನಿಧಿಗಳು, ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಇಲ್ಲಿನ ಸಮಸ್ಯೆ ಅರಿತು ಅವರು ಸ್ಪಂದಿಸಲಿಲ್ಲ. ಎಡಮಂಗಲ ಗ್ರಾ.ಪಂ. ಕಚೇರಿ, ಎಡಮಂಗಲ ಪ್ರೌಢಶಾಲೆ, ಸಿಎ ಬ್ಯಾಂಕ್‌, ಎಡಮಂಗಲ ದೇವಸ್ಥಾನ, ಕಡಬ ಪೇಟೆ ಸಂಪರ್ಕಿಸಲು ಇದೇ ರಸ್ತೆಯಾಗಿದ್ದರೂ ಅದು ವಿಸ್ತರಣೆ, ಅಭಿವೃದ್ಧಿ ಆಗದಿರುವುದು ವಿಪರ್ಯಾಸವೇ ಸರಿ. ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿಗೆ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

 ಮನವಿ ಸಲ್ಲಿಸಲಾಗಿದೆ
ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಜಿ.ಪಂ.ಗೆ ಈಗಾಗಲೇ ಗ್ರಾ.ಪಂ. ವತಿಯಿಂದ ಮನವಿ ಸಲ್ಲಿಸಲಾಗಿದೆ. ಗ್ರಾ.ಪಂ. ರಸ್ತೆಗಳನ್ನು ಆದ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.
– ಸುಂದರ ಗೌಡ
ಅಧ್ಯಕ್ಷರು, ಎಡಮಂಗಲ ಗ್ರಾ.ಪಂ.

 ಮಳೆಗಾಲದ ಬಳಿಕ
ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಕರಿಂಬಿಲ ಎಂಬಲ್ಲಿ ರಸ್ತೆ ಹದಗೆಟ್ಟು ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ರಸ್ತೆ ಮರು ಡಾಮರು ಕಾಮಗಾರಿಗೆ ಸಿಆರ್‌ಎಫ್‌ನಿಂದ 3 ಕೋಟಿ ರೂ. ಅನುದಾನ ಮಂಜೂರಾಗಿದೆ. ಮಳೆಗಾಲ ಕಳೆದ ಬಳಿಕ ಕಾಮಗಾರಿಗೆ ಚಾಲನೆ ದೊರೆಯಲಿದೆ.
 - ಶುಭದಾ ಎಸ್‌.
ಉಪಾಧ್ಯಕ್ಷರು, ಸುಳ್ಯ ತಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next