ಚಿತ್ರದ ಹೆಸರು “ಭಾನು ವೆಡ್ಸ್ ಭೂಮಿ’. ಇಷ್ಟು ಹೇಳಿದ ಮೇಲೆ ಚಿತ್ರದ ನಾಯಕನ ಹೆಸರು “ಭಾನು’, ನಾಯಕಿಯ ಹೆಸರು “ಭೂಮಿ’. ಇದೊಂದು ಲವ್ ಸ್ಟೋರಿ ಎನ್ನುವ ಯಾವ ಅಂಶಗಳನ್ನೂ ಪ್ರತ್ಯೇಕವಾಗಿ ಬಿಡಿಸಿ ಹೇಳುವ ಅಗತ್ಯವಿಲ್ಲ. ಏಕೆಂದರೆ, ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವೆಡ್ಸ್ ಸೀರೀಸ್ ಚಿತ್ರಗಳನ್ನು ನೋಡಿ ಎಕ್ಸ್‌ಪರ್ಟ್ ಆಗಿರುವ ಪ್ರೇಕ್ಷಕ ಇವೆಲ್ಲವನ್ನೂ ಕಣ್ಣಂಚಿನಲ್ಲೇ ಅರ್ಥ ಮಾಡಿಕೊಳ್ಳಬಲ್ಲ “ಬುದ್ಧಿವಂತ’. ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳುವವರೆಗೂ “ಭಾನು ವೆಡ್ಸ್ ಭೂಮಿ’ಯಂತಹ ಚಿತ್ರಗಳು ಬರುತ್ತಲೇ ಇರುತ್ತವೆ.
ಈಗ ನೇರವಾಗಿ “ಭಾನು ವೆಡ್ಸ್ ಭೂಮಿ’ಯ ವಿಷಯಕ್ಕೆ ಬರೋಣ. ಅವಳು ಅಪ್ಪಟ ಮಲೆನಾಡಿನ ಹುಡುಗಿ. ಹೆಸರು “ಭೂಮಿ’. ಪ್ರಭು ಎನ್ನುವ ಹುಡುಗನನ್ನು ಪ್ರೀತಿಸಿ ಅವನನ್ನು ಹುಡುಕಿಕೊಂಡು ಮೈಸೂರಿಗೆ ಬರುವ “ಭೂಮಿ’ ಪುಂಡರ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾಳೆ. ಆಗ ಎಂದಿನಂತೆ ಅದೇ ವೇಳೆಗೆ ಒಂದಷ್ಟು ಬಿಲ್ಡಪ್ ಮೂಲಕ ಎಂಟ್ರಿ ಕೊಡುವ ನಾಯಕ “ಭಾನು’ ಪೋಲಿಗಳ ಮೈ ಮೂಳೆ ಮುರಿದು “ಭೂಮಿ’ಯನ್ನು ಕಾಪಾಡುತ್ತಾನೆ. ಬಳಿಕ “ಭಾನು’ “ಭೂಮಿ’ಯ ಸಹಾಯಕ್ಕೆ ನಿಲ್ಲುತ್ತಾನೆ. ಆಮೇಲೆ ಏನಾಗುತ್ತದೆ?
ಮುಂದೆ ಚಿತ್ರದ ನಾಯಕ ಮತ್ತು ನಾಯಕಿಯ ಹೆಸರೇ ಭಾನು ಮತ್ತು ಭೂಮಿ ಅಂತ ಇರುವಾಗ ಇಬ್ಬರು ಚಿತ್ರದಲ್ಲಿ ಒಂದಾಗದಿದ್ದರೆ, “ಭಾನು ವೆಡ್ಸ್ ಭೂಮಿ’ ಟೈಟಲ್‌ಗೆ ಅರ್ಥ ಬರುವುದಾದರೂ ಹೇಗೆ? ಅಂತಿಮವಾಗಿ ಪ್ರೇಕ್ಷಕರು ಮೊದಲೇ ಏನು ನಿರೀಕ್ಷೆ ಮಾಡಿರುತ್ತಾರೋ, ಅದು ಚಿತ್ರದಲ್ಲಿ ಖಂಡಿತಾ ಆಗಿಯೇ ತಿರುತ್ತದೆ. ಅದೇ ಚಿತ್ರದ ಕ್ಲೈಮ್ಯಾಕ್ಸ್ ಅನ್ನೋದರಲ್ಲೂ ನೋ ಡೌಟ್! ಇಷ್ಟು ಹೇಳಿದ ಮೇಲೆ ಚಿತ್ರದ ಕಥಾಹಂದರದ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ.
ಕನ್ನಡದಲ್ಲಿ ಹುಡುಕುತ್ತಾ ಹೋದರೆ ಇದೇ ಕಥೆಯನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದ ಚಿತ್ರಗಳ ಉದಾಹರಣೆಯ ದೊಡ್ಡ ಪಟ್ಟಿಯೇ ಸಿಗುತ್ತದೆ. ಚಿತ್ರದ ಕಥೆಯಲ್ಲಿ ಎಳ್ಳಷ್ಟು ಹೊಸತನವಿಲ್ಲ. ಹೋಗಲಿ, ಚಿತ್ರದ ನಿರೂಪಣೆಯಲ್ಲಾದರೂ ಏನಾದ್ರೂ ಹೊಸತನವಿದೆಯಾ ಅಂದ್ರೆ ಅದಕ್ಕೆ ಉತ್ತರಿಸೋದು ಕಷ್ಟ. ಅಲ್ಲೂ ಏನೂ ಸಿಗುವುದಿಲ್ಲ. ಹತ್ತಾರು ಚಿತ್ರಗಳಿಂದ ಭಟ್ಟಿ ಇಳಿಸಿದ ದೃಶ್ಯಗಳೇ ಚಿತ್ರದುದ್ದಕ್ಕೂ ಕಾಣುತ್ತವೆ. ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಹತ್ತಾರು ಚಿತ್ರಗಳ, ಒಂದೊಂದು ದೃಶ್ಯಗಳನ್ನು “ಭಾನು ವೆಡ್ಸ್ ಭೂಮಿ’ಯಲ್ಲಿ ಪಡಿಯಚ್ಚಿನಂತೆ ತೆರೆಗೆ ಇಳಿಸಿರುವ ಹೆಗ್ಗಳಿಕೆ ನಿರ್ದೇಶಕರಿಗೆ ಸಲ್ಲಬೇಕು.
ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ನಾಯಕ ನಟ ಸೂರ್ಯಪ್ರಭ್ ನಟನೆಯಲ್ಲಿ ಸಾಕಷ್ಟು ಪಳಗಬೇಕಿದೆ. ಲವ್, ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್ ಹೀಗೆ ಎಲ್ಲಾ ಸನ್ನಿವೇಶಗಳಲ್ಲೂ ಹಾವ-ಭಾವ ಎರಡರಲ್ಲೂ ಒಂಚೂರು ಬದಲಾವಣೆ ಇಲ್ಲದ ನಿರ್ಭಾವುಕ ಅಭಿನಯ ನೋಡುಗರಿಗೆ ದಂಗು ಬಡಿಸಿದರೆ ಅಚ್ಚರಿಯಿಲ್ಲ. ಇನ್ನು ಚಿತ್ರದ ನಾಯಕಿ ರಕ್ಷತಾ ಮಲಾ°ಡ್ ಅಭಿನಯ ಪರವಾಗಿಲ್ಲ ಎನ್ನಬಹುದಷ್ಟೆ.
ಉಳಿದಂತೆ ನಟರಾದ ಶೋಭರಾಜ್ ಅಭಿನಯ ನೋಡುಗರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಪ್ರೇಮಿಗಳನ್ನು ಒಂದು ಮಾಡುವುದೇ ತನ್ನ ಡ್ನೂಟಿಯನ್ನಾಗಿ ಮಾಡಿಕೊಂಡ ಪೊಲೀಸ್ ಅಧಿಕಾರಿಯ ಪಾತ್ರವೇ ಚಿತ್ರದಲ್ಲಿ ಅತ್ಯಂತ ಬಾಲಿಶ ಎಂದೆನಿಸುತ್ತದೆ. ಇರಲೇಬೇಕು ಎನ್ನುವ ಕಾರಣಕ್ಕಾಗಿ ರಂಗಾಯಣ ರಘು ಅವರ ಪಾತ್ರವನ್ನು ಚಿತ್ರದಲ್ಲಿ ಬಲವಂತವಾಗಿ ಎಳೆದುತಂದಂತಿದೆ. ಉಳಿದಂತೆ ಹತ್ತಾರು ಪಾತ್ರಗಳು ಬಂದು ಹೋದರೂ ಒಂದೊಂದರದ್ದು ಒಂದೊಂದು ವ್ಯಥೆ ಇರುವುದರಿಂದ ಅವುಗಳ ಬಗ್ಗೆ ಹೇಳದಿರುವುದೇ ಒಳಿತು.
ಚಿತ್ರ: ಭಾನು ವೆಡ್ಸ್ ಭೂಮಿ
ನಿರ್ಮಾಣ: ಕಿಶೋರ್ ಶೆಟ್ಟಿ
ನಿರ್ದೇಶನ: ಜಿ.ಕೆ.ಆದಿ
ತಾರಾಗಣ: ಸೂರ್ಯಪ್ರಭ್, ರಕ್ಷತಾ ಮಲ್ನಾಡ್, ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾ ಮೂರ್ತಿ, ಹಂಸಾ, ಸೂರ್ಯ ಕಿರಣ್ ಮತ್ತಿತರರು
* ಜಿ.ಎಸ್.ಕೆ ಸುಧನ್