Advertisement

ಭ್ರಷ್ಟರಿಗೆ ಕಷ್ಟ;ಬಡವರಿಗೆ ಮೋದಿ ಇಷ್ಟ

12:30 AM Feb 11, 2019 | |

ಹುಬ್ಬಳ್ಳಿ: ಭ್ರಷ್ಟರಿಗೆ ಮೋದಿ ಎಂದರೆ ಕಷ್ಟ. ನಿಷ್ಠರಿಗೆ, ಬಡಜನತೆಗೆ ಮೋದಿ ಎಂದರೆ ಇಷ್ಟ. ನಿಮ್ಮ ಪ್ರಧಾನ ಸೇವಕ-ಕಾವಲುಗಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದಲ್ಲಾಳಿಗಳಿಗೆ ಮೂಗುದಾರ ಹಾಕಿ ದೇಶದ ಬಡವರಿಗೆ ದಕ್ಕಬೇಕಾದ ಲಾಭವನ್ನು ನೇರವಾಗಿ ಅವರ ಖಾತೆಗೆ ಜಮಾ ಆಗುವಂತೆ ಮಾಡಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಬಿಜೆಪಿ ಆಯೋಜಿಸಿದ್ದ ಲೋಕಸಭಾ ಚುನಾವಣಾ ಹಿನ್ನೆಲೆ ಪ್ರಚಾರಾಂದೋಲನಕ್ಕೆ ಚಾಲನೆ ಸಮಾವೇಶದಲ್ಲಿ ಮಾತನಾಡಿದ ಅವರು, ಬೇನಾಮಿ ಆಸ್ತಿ ಗಳಿಸಿದವರು, ರೈತರು-ಬಡವರನ್ನು ಶೋಷಣೆ ಮಾಡಿದ ದಲ್ಲಾಳಿಗಳು ಇದೀಗ ಸರದಿಯಲ್ಲಿ ಕೋರ್ಟ್‌ಗಳ ಮುಂದೆ ನಿಲ್ಲುವಂತಾಗಿದೆ. ಎಷ್ಟು ತಿಂದಿದ್ದಾರೋ ಪ್ರತಿ ಪೈಸೆಯ ಲೆಕ್ಕ ಕೊಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ಗೆ ರೈತರ, ಯುವಕರ, ಬಡವರ ಹಿತ ಬೇಕಾಗಿಲ್ಲ. ಬದಲಾಗಿ ಸ್ವಾರ್ಥ ಸಾಧನೆಯಾಗಬೇಕಿದೆ. ಇಷ್ಟು ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್‌ ಅದನ್ನೇ ಮಾಡಿಕೊಂಡು ಬಂದಿದೆ ಎಂದರು.

ಪ್ರಧಾನ ಮಂತ್ರಿ ಕಿಸಾನ್‌ ಯೋಜನೆ ಅಡಿಯಲ್ಲಿ 5 ಎಕರೆ ಒಳಗಿನ ದೇಶದ ಪ್ರತಿ ರೈತನಿಗೂ ವರ್ಷಕ್ಕೆ 6 ಸಾವಿರ ರೂ. ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಆಗುವಂತೆ ಮಾಡಲಾಗಿದೆ. ದೇಶದ ಶೇ.90 ರೈತರಿಗೆ ಇದರ ಪ್ರಯೋಜನ ದೊರೆಯಲಿದೆ. ಈ ಹಿಂದೆ ಯುಪಿಎ ಸರ್ಕಾರ ದೇಶದ ರೈತರ ಸುಮಾರು 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾಗಿ ಹೇಳಿಕೊಂಡಿತ್ತು. ನಮ್ಮದು ಯುಪಿಎ ರೀತಿ ಕಾಲಮಿತಿ ಯೋಜನೆಯಲ್ಲ, ಬದಲಾಗಿ ಇದು ನಿರಂತರವಾಗಿ ರೈತರ ಖಾತೆಗೆ ಹಣ ನೀಡಿಕೆ ಯೋಜನೆಯಾಗಿದೆ ಎಂದರು.

ನಗರ ಬಡವರಿಗೆ 73 ಲಕ್ಷ ಮನೆ: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಗರ ಬಡವರಿಗೆ ವಸತಿ ನೀಡಲಾಗುತ್ತಿದೆ. ಹಿಂದಿನ ಯುಪಿಎ ಸರ್ಕಾರ ಹತ್ತು ವರ್ಷಗಳ ಆಡಳಿತದಲ್ಲಿ 13 ಲಕ್ಷ ಮನೆಗಳ ನಿರ್ಮಾಣಕ್ಕೆ ಮುಂದಾಗಿ ಅದರಲ್ಲಿ ಕೇವಲ 8 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿತ್ತು. ಎನ್‌ಡಿಎ ಸರ್ಕಾರ ಕೇವಲ ನಾಲ್ಕುವರೆ ವರ್ಷಗಳಲ್ಲಿ ಸುಮಾರು 73 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜಿಸಿದೆ. ಈಗಾಗಲೇ 15 ಲಕ್ಷ ಮನೆಗಳು ಪೂರ್ಣಗೊಂಡಿದ್ದು, 39 ಲಕ್ಷ ಮನೆಗಳು ಬಹುತೇಕ ಮುಗಿಯುವ ಹಂತದಲ್ಲಿವೆ. 40-50 ವರ್ಷಗಳಲ್ಲಿ ಆಗದ ಸಾಧನೆ-ಪ್ರಗತಿಯನ್ನು ಕೇವಲ ನಾಲ್ಕುವರೆ ವರ್ಷಗಳಲ್ಲಿ ಮಾಡಿ ತೋರಿಸಲಾಗಿದೆ. ಇದು ನಮ್ಮ ಬದ್ಧತೆ ಹಾಗೂ ಜನರ ಬಗೆಗಿನ ಕಳಕಳಿಯಾಗಿದೆ ಎಂದರು.

ಅದೇ ರೀತಿ ಮಧ್ಯಮ ವರ್ಗದ ಜನರಿಗೂ ವಸತಿ ಸೌಲಭ್ಯ ನಿಟ್ಟಿನಲ್ಲಿ ಹಲವು ರಿಯಾಯ್ತಿಗಳನ್ನು ಘೋಷಿಸಲಾಗಿದೆ. ಮಧ್ಯಮ ವರ್ಗದವರು 18 ಲಕ್ಷ ರೂ.ವರೆಗೆ ಪಡೆಯುವ ಗೃಹ ಸಾಲದ ಮೇಲೆ ಬಡ್ಡಿಯಲ್ಲಿ ವಿನಾಯ್ತಿ ದೊರೆಯಲಿದೆ. ಅದೇ ರೀತಿ 20 ಲಕ್ಷ ರೂ.ನಷ್ಟು ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಸಾಲ ಪಡೆದರೆ ಅಂದಾಜು 5-6 ಲಕ್ಷ ಉಳಿತಾಯವಾಗಲಿದೆ. ಎರಡನೇ ಗೃಹ ಖರೀದಿ ತೆರಿಗೆ ಮುಕ್ತಗೊಳಿಸಲಾಗಿದೆ. ಬಾಡಿಗೆ ಆದಾಯ ಮೇಲಿನ ತೆರಿಗೆಯನ್ನು 1 ಲಕ್ಷ ರೂ.ನಿಂದ 2.40 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದರು.

Advertisement

ಸುಧಾಮೂರ್ತಿಯೊಂದಿಗೆ ವಿದ್ಯಾರ್ಥಿಗಳ ಸೆಲ್ಫಿ

ಹುಬ್ಬಳ್ಳಿ ನಗರದ ಗಬ್ಬೂರು ಬಳಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಐಐಐಟಿ ಆಡಳಿತ ಮಂಡಳಿ ಅಧ್ಯಕ್ಷೆ ಸುಧಾಮೂರ್ತಿ ಸಂಜೆ 5 ಗಂಟೆಗೆ ಬಂದು ತಮಗೆ ಮೀಸಲಾಗಿದ್ದ ಆಸನದಲ್ಲಿ ಆಸೀನರಾಗಿದ್ದರು. ಆದರೆ ಕಾರ್ಯಕ್ರಮ ಆರಂಭವಾಗಲು ಇನ್ನೂ ಸಾಕಷ್ಟು ಸಮಯವಿದ್ದು ದರಿಂದ ಅವರು ಐಐಟಿ ಹಾಗೂ ಐಐಐಟಿ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯಲು ಮುಂದಾದರು. ವಿದ್ಯಾರ್ಥಿಗಳನ್ನು ಪರಿಚಯಿ ಸಿಕೊಂಡರು. ಆಗ ವಿದ್ಯಾರ್ಥಿಗಳು ಸುಧಾಮೂರ್ತಿಯವರ ಕೈ ಕುಲುಕಿದರಲ್ಲದೇ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು.

5 ವಿಕಾಸ ಮಂತ್ರದೊಂದಿಗೆ ಅಭಿವೃದ್ಧಿ ಯೋಜನೆ

ಎನ್‌ಡಿಎ ಸರ್ಕಾರ ವರ್ತಮಾನದ ಜತೆಗೆ ಭವಿಷ್ಯವನ್ನೂ ದೃಷ್ಟಿಯಲ್ಲಿಕೊಂಡು ಐದು ವಿಕಾಸ ಮಂತ್ರದೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದೆ. ಅನೇಕ ಮೂಲಭೂತ ಸೌಕರ್ಯಗಳನ್ನು ಜಾರಿಗೊಳಿಸುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಸಬಲೀಕರಣ ಭಾವನೆಯೊಂದಿಗೆ ದೇಶಕ್ಕೆ ಶಕ್ತಿ ನೀಡುವ ಯತ್ನವನ್ನು ಎನ್‌ಡಿಎ ಸರ್ಕಾರ ಮಾಡುತ್ತಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ, ರೈತರಿಗೆ ಸಿಂಚಾಯಿ, ಜನರ ಸಮಸ್ಯೆಗಳಿಗೆ ಸ್ಪಂದನೆ ಈ ನಿಟ್ಟಿನಲ್ಲಿಯೇ ತಮ್ಮ ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಮೊಳಗಿದ ಮೋದಿ..ಮೋದಿ.. ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಬಂದಾಗ ಘೋಷಣೆ ಕೂಗದಂತೆ ಉದ್ಘೋಷಕಿ ಹಲವು ಬಾರಿ ಮನವಿ ಮಾಡಿದರೂ ಪ್ರಧಾನಿ ವೇದಿಕೆಗೆ ಬರುತ್ತಿದ್ದಂ ತೆಯೇ ಐಐಟಿ ಹಾಗೂ ಐಐಐಟಿ ವಿದ್ಯಾರ್ಥಿಗಳು ಮೋದಿ..ಮೋದಿ…ಎಂದು ಕೂಗಿದರು. ಮೋದಿ ಅವರನ್ನು ಸಮೀಪದಿಂದ ನೋಡುವ ಅವಕಾಶ ಲಭಿಸಿದ್ದಕ್ಕೆ ಸಂಭ್ರಮ ಪಟ್ಟರು. ಮೊಬೈಲ್‌ಗ‌ಳಲ್ಲಿ ಮೋದಿಯವರ ಫೋಟೊಗಳನ್ನು ಸೆರೆ ಹಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next