Advertisement

ರಾಮನಗರದಲ್ಲಿನ್ನೂ ಉಗ್ರರು ಬೀಡುಬಿಟ್ಟಿರುವ ಶಂಕೆ

12:21 PM Aug 08, 2018 | |

ರಾಮನಗರ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತವರು ಜಿಲ್ಲೆಯಲ್ಲಿಯೇ ಉಗ್ರನೊಬ್ಬನ ಬಂಧನವಾಗಿದ್ದು, ಇನ್ನಷ್ಟು ಉಗ್ರರು ಬೀಡಬಿಟ್ಟಿರಬಹುದು ಎಂಬ ಆತಂಕ ಜಿಲ್ಲೆಯ ಜನರಲ್ಲಿ ಮೂಡಿದೆ. 

Advertisement

ಈಗಾಗಲೇ ರಾಮನಗರದಲ್ಲಿ ಎನ್‌ಐಎ ಹಾಗೂ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಜೆಎಂಬಿ ಉಗ್ರ ಮುನೀರ್‌ ಶೇಖ್‌ ಅಲಿಯಾಸ್‌ ಕೌಸರ್‌ನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದು, ಮುನೀರ್‌ ಮೂಲತಃ ಬಾಂಗ್ಲಾ ದೇಶದವನಾಗಿದ್ದು, ರಾಮನಗರದಲ್ಲಿ ಕಳೆದ ಎರಡುವರೆ ತಿಂಗಳಿನಿಂದ ವಾಸವಾಗಿದ್ದನು ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿ 8ರಿಂದ 10 ಗಂಟೆ ವೇಳೆ ಮಧ್ಯೆ ಉಗ್ರನ ಮನೆ ಮೇಲೆ ದಾಳಿ ನಡೆಸಿದ ಎನ್‌ಐಎ ತಂಡ ತಡರಾತ್ರಿವರೆಗೆ ತಪಾಸಣೆ ನಡೆಸಿ ಕೆಲ ವಸ್ತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದೆ. ಉಗ್ರ ಮುನೀರ್‌ ಶೇಖ್‌ ಪತ್ನಿ ಶಜೀದ್‌ ಬಿಬಿ ಹಾಗೂ ಆಕೆಯ ಅಣ್ಣ, ಅತ್ತಿಗೆಗಾಗಿ ಹುಡುಕಾಟ ನಡೆದಿದೆ.

ಲ್ಯಾಪ್‌ಟಾಪ್‌ ಮಿಸ್ಸಿಂಗ್‌: ಉಗ್ರನ ಬಂಧನದ ವೇಳೆ ಲ್ಯಾಪ್‌ಟಾಪ್‌ ಪತ್ತೆಯಾಗಿದ್ದು, ಪತ್ನಿ ಬೇರೆಡೆ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ಪತ್ತೆಗೆ ತನಿಖೆ ತೀವ್ರಗೊಳಿಸಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿ ಮಹತ್ವದ ದಾಖಲೆಗಳಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ದೆಹಲಿ ವಿಳಾಸ: ಉಗ್ರ ದೆಹಲಿ ವಿಳಾಸವುಳ್ಳ ಆಧಾರ್‌ ಕಾರ್ಡ್‌ ನೀಡಿ ರಾಮನಗರದಲ್ಲಿ ಮನೆ ಬಾಡಿಗೆ ಪಡೆದಿದ್ದು, ಶೀಘ್ರದಲ್ಲೇ ಮನೆ ಕರಾರು ಪತ್ರ ಮಾಡಿಸಿಕೊಳ್ಳುವುದಾಗಿ ಹೇಳಿದ್ದನು ಎಂದು ಮನೆ ಮಾಲೀಕ ಅಮೀರ್‌ಖಾನ್‌ ಪೊಲೀಸರಿಗೆ ತಿಳಿಸಿದ್ದಾನೆ.

Advertisement

ಶಂಕಿತರ ವಶ?: ಒಟ್ಟಾರೆ ಉಗ್ರನ ಬಂಧನದ ವೇಳೆ ಐಬಿ ಹಾಗೂ ಎನ್‌ಐಎ ಅಧಿಕಾರಿಗಳು ಅನೇಕ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮನಗರದಲ್ಲಿ ಬೀಡು ಬಿಟ್ಟಿರುವ ಹೊಸಬರ, ಶಂಕಿತರ ಪತ್ತೆಗೆ ಈಗಾಗಲೇ ಜಿಲ್ಲಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೆಲವು ಶಂಕಿತರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ.

ರಾಮನಗರ ಜಿಲ್ಲೆಯಲ್ಲಿ ವಾಸವಿರುವ ವಿದೇಶಿ ಪ್ರಜೆಗಳ ಮಾಹಿತಿ ಮತ್ತು ಅವಧಿ ಮೀರಿ ಉಳಿದುಕೊಂಡಿರುವವರ ಮಾಹಿತಿ ಪಡೆದು ಆಯುಕ್ತರ ಗಮನಕ್ಕೆ ತರಲಾಗುವುದು. ಅಕ್ರಮ ಕಂಡು ಬಂದರೆ ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆಯೂ ಮಾಹಿತಿ ನೀಡಲಾಗುವುದು.
-ರಮೇಶ್‌ ಬಾನೋತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 

ಸೈಕಲ್‌ನಲ್ಲೇ ಬಟ್ಟೆ ವ್ಯಾಪಾರ: ಸೈಕಲ್‌ನಲ್ಲಿ ತೆರಳಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮುನೀರ್‌, ಬೆಳಗ್ಗೆ ಹೊರಟರೆ ಸಂಜೆ ವೇಳೆಗೆ ಮನೆಗೆ ವಾಪಸ್ಸಾಗುತ್ತಿದ್ದನು. ಎಂದೂ ಅನುಮಾನಸ್ಪದವಾಗಿ ನಡೆದುಕೊಂಡಿರಲಿಲ್ಲ. ಪೊಲೀಸರು ಯಾಕೆ ಅವರನ್ನು ವಶಕ್ಕೆ ಪಡೆದರು ಎಂಬುದೇ ತನಗೆ ತಿಳಿದಿರಲಿಲ್ಲ. ಮಾಧ್ಯಮದಲ್ಲಿ ಪ್ರಸಾರವಾಗಿದ್ದನ್ನು ಕಂಡು ದಿಗ್ಬಮೆ ಆಯಿತು ಎಂದು ಮನೆಯ ಮಾಲೀಕ ಅಮೀರ್‌ ಖಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next