Advertisement

ಕರಾವಳಿ ಕೃಷಿಭೂಮಿಯಲ್ಲಿ ಮೈದಳೆದು ನಿಂತ ಭತ್ತದ ತೆನೆ

06:00 AM Oct 02, 2018 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಗೋಪಾಡಿ, ಕುಂಭಾಸಿ, ಕೊರವಡಿ, ಕೊಮೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ವರ್ಷ ಸುರಿದ ಉತ್ತಮ ಮಳೆಯಿಂದಾಗಿ ಉತ್ತಮ ಭತ್ತದ ಫಸಲು ಬಂದಿದೆ. ಕರಾವಳಿಯಲ್ಲಿ ನವರಾತ್ರಿಯ ನಂತರ ಕಟಾವು ಕಾರ್ಯ ಆರಂಭಗೊಳ್ಳಲಿದ್ದು ಹಿಂಗಾರು ಮಳೆಯ ಆರ್ಭಟ ರೈತರಲ್ಲಿ ಆತಂಕ ಮೂಡಿಸಿದೆ.

Advertisement

ಕರಾವಳಿಯಲ್ಲಿ ಉತ್ತಮ ಇಳುವರಿ 
ಗ್ರಾಮೀಣ ಭಾಗದಲ್ಲಿ  ಎದುರಾಗಿರುವ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಾದ ಹಿನ್ನೆಲೆ ಕರಾವಳಿ ಸೇರಿದಂತೆ ಹಲವೆಡೆಗಳಲ್ಲಿ ಪರ್ಯಾಯವಾಗಿ ನಾಟಿ ಕಾರ್ಯಕ್ಕೂ ಮುನ್ನ ಗದ್ದೆಯನ್ನು ಸಾವಯವ ಗೊಬ್ಬರ ಹಾಕಿ ಸಮರ್ಪಕವಾಗಿ ಉಳುಮೆ ಮಾಡಿದ ಬಳಿಕ ಬೀಜವನ್ನು ನೆನೆಹಾಕಿ ಬಿತ್ತನೆಯ ಪ್ರಯೋಗವನ್ನು ಕಂಡು ಯಶಸ್ವಿಯಾಗಿದ್ದಾರೆ. ಕರಾವಳಿ ಸೇರಿದಂತೆ ಗ್ರಾಮೀಣ ಭಾಗದ ಸಾಂಪ್ರದಾಯಿಕ ಕೃಷಿಕರು ಮಾತ್ರ ಸಾಲು ನಾಟಿ ಮಾಡಿ ಉತ್ತಮ ಇಳುವರಿ ಕಂಡುಕೊಂಡಿದ್ದಾರೆ.

ಕಟಾವು ಯಂತ್ರಗಳತ್ತ ರೈತರ ಒಲವು 
ಭತ್ತದ ಪೈರು ಕಟಾವು ಕಾರ್ಯ ಪ್ರಾರಂಭಗೊಳ್ಳುತ್ತಿ ದ್ದಂತೆ ಪರಿಸರದಲ್ಲಿ ವಿರಳವಾಗುತ್ತಿರುವ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯಿಂದ ಯಾಂತ್ರಿಕ ಕಟಾವು ಯಂತ್ರಗಳ ಬಳಕೆ ಅನಿವಾರ್ಯವಾಗಿದ್ದು ಇಲ್ಲಿನ ಗ್ರಾಮೀಣ ಭಾಗದ ರೈತರು ಕಟಾವು ಯಂತ್ರದ ಬಳಕೆಯಲ್ಲಿ ಹೆಚ್ಚಿನ ಒಲವು ಮೂಡಿಸಿದ್ದಾರೆ.

ಕಳೆನಾಶಕ ಸಿಂಪಡನೆ ಮಾರಕ
ಮರೆಯಾಗುತ್ತಿರುವ ಸಾಂಪ್ರದಾಯಿಕ ಕೃಷಿ ಚಟುವಟಿಕೆ ಹಾಗೂ ಕೃಷಿಯೆಡೆಗೆ ಆಸಕ್ತಿ ಕಳೆದು ಕೊಳ್ಳುತ್ತಿರುವ ಯುವ ಸಮುದಾಯಗಳ ನಡುವೆ ಯಾಂತ್ರಿಕೃತ ಕೃಷಿಗೆ ಮಾರು ಹೋಗುತ್ತಿರುವ ಪರಿಣಾಮ ಉತ್ತಮ ಫಸಲು ಕಂಡುಕೊಳ್ಳಬೇಕು ಎನ್ನುವ ನಿಟ್ಟಿನಿಂದ ಗದ್ದೆಯಲ್ಲಿ ಬೆಳೆಯುವ ವಾಂಟ್‌ಕೀಲ್‌, ಚಿಂಕ್‌ ಹುಲ್ಲು, ಕುರುಬಲು ಸೇರಿದಂತೆ ಇನ್ನಿತರ ಹುಲ್ಲುಗಳು ಕೃಷಿ ಭೂಮಿಯನ್ನು ಆವರಿಸು ತ್ತಿದ್ದಂತೆ  ಅವುಗಳ ನಾಶಕ್ಕಾಗಿ ರಾಸಾಯನಿಕ ಕಳೆನಾಶಕ ಬಳಸುತ್ತಿರುವುದರಿಂದ  ಮಣ್ಣಿನ ಫಲ ವತ್ತತೆಗೆ ತೊಂದರೆಯಾಗುವ ಜತೆಗೆ ಎರೆಹುಳುಗಳ ಸಂತತಿಯೇ ನಾಶವಾಗುತ್ತಿದೆ.

ಸಂತಸ ತಂದಿದೆ
ಪ್ರತಿ ವರ್ಷದಂತೆ ಈ ಬಾರಿ ಎಂಒ 4 ಸಸಿಯಿಂದ ಸಾಲು ನಾಟಿ ಮಾಡಲಾಗಿದೆ. ಫಲವತ್ತಾದ ಮಣ್ಣು ಸುತ್ತಮುತ್ತಲ ಕೃಷಿ ಭೂಮಿಯಲ್ಲಿ ಒಂದೇ ಸಮನಾಗಿ ಭತ್ತದ ತೆನೆಗಳು ಮೈದಳೆದು ನಿಂತಿದೆ. ಹಿಂಗಾರು ಮಳೆ ಕೊನೆಯಲ್ಲಿ ಕೈಕೊಟ್ಟಿದ್ದು ಭತ್ತದ ತೆನೆ ಹೊಡೆದು ಬೆಳೆಯುವ ಸಂದರ್ಭ ಇದೇ ರೀತಿಯಲ್ಲಿ ಮಳೆಯ ಪ್ರಮಾಣ ಅಧಿಕವಾದರೆ ತೆನೆ ಬೀಳುವ ಸಾಧ್ಯತೆ ಇದೆ. ಇನ್ನು ಹದಿನೈದರಿಂದ ಇಪ್ಪತ್ತು ದಿನಗಳ ಒಳಗೆ ಕಟಾವು ಕಾರ್ಯ ಆರಂಭಗೊಳ್ಳಲಿದೆ.
– ಆನಂದ ದೇವಾಡಿಗ, ಮೇಲ್ಗುಡ್ಡಿ ಮನೆ, ಹಿರಿಯ ಸಾವಯವ ಕೃಷಿಕರು ತೆಕ್ಕಟ್ಟೆ

Advertisement

– ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next