ಬೆಂಗಳೂರು: ಸಮಾನತೆ ಹಿಂದಿಕ್ಕಿ ಕೋಮುವಾದ ಮುನ್ನೆಲೆಗೆ ಬರುತ್ತಿರುವ ಕಾಲಮಾನ ಇದಾಗಿದೆ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ವತಿಯಿಂದ ಸೋಮವಾರ ಪ್ರಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಭಾರತ ನಕರತಾಕ್ಮವಾಗಿ ಬದಲಾಗುತ್ತಿದೆ. ಇಲ್ಲಿ ಜಾತಿ, ಧರ್ಮ, ಮತೀಯತೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಧರ್ಮ ಮತ್ತು ದೇವರ ಕಲ್ಪನೆಯ ಸಕಾರಾತ್ಮಕ ಅಂಶಗಳನ್ನು ಬಳಸಿಕೊಂಡು ಜಾತಿ ಮತ್ತು ಧರ್ಮದ ಜಾಡ್ಯ ತೊಲಗಿಸಬೇಕು ಎಂದು ತಿಳಿಸಿದರು.
ಇತ್ತೀಚಿಗೆ ನಡೆದ ಸಂತ ಕಬೀರರ 500ನೇ ವರ್ಷಾಚರಣೆಯಲ್ಲಿ ರಾಷ್ಟ್ರ ನಾಯಕರು ಕಬೀರನ ಹೆಸರನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ದುರಂತ. ಇಂದು ಜಾತಿ ರಾಜಕಾರಣ, ಧರ್ಮ ರಾಜಕಾರಣ ಮತ್ತು ಪಕ್ಷ ರಾಜಕಾರಣ ಒಂದರಲ್ಲಿ ಒಂದು ಬೆರೆತುಕೊಂಡಿರುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸೌಹಾರ್ದತೆ ಸ್ಥಾಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಇಬ್ರಾಹಿಂ ಸುತಾರ್, ನಮ್ಮ ಧರ್ಮ ಗ್ರಂಥ ಓದುವ ಜತೆಗೆ ಬೇರೆ ಧರ್ಮ ಗ್ರಂಥಗಳ ಬಗ್ಗೆ ತುಲನಾತ್ಮಕವಾಗಿ ತಿಳಿದುಕೊಳ್ಳಬೇಕು. ಎಲ್ಲ ಧರ್ಮ ಗ್ರಂಥಗಳಲ್ಲಿ ಪರಮಾತ್ಮನ ಬಗ್ಗೆ ಉಲ್ಲೇಖ ಮಾಡಲಾಗಿದೆ. ಎಲ್ಲವನ್ನೂ ಪ್ರಾಮಾಣಿಕವಾಗಿ ಹಾಗೂ ಕೂಲಂಕುಶವಾಗಿ ಓದಿದರೆ ಎಲ್ಲದರಲ್ಲಿ ಹೇಳಿರುವುದು ಒಂದೇ ಎಂಬುದು ತಿಳಿಯುತ್ತದೆ.
ಒಬ್ಬರು ಮತ್ತೂಬ್ಬರ ಧರ್ಮವನ್ನು ಗೌರವಿಸುವುದು ನಿಜವಾದ ಭಾವೈಕ್ಯತೆ ಎಂದರು. ನಿವೃತ್ತ ಐಪಿಎಸ್ ಅಧಿಕಾರಿ ಯು.ನಿಸಾರ್ ಅಹಮದ್, ವಿಶ್ರಾಂತ ಕುಲಪತಿ ಪ್ರೊ.ಕೆ.ಆರ್.ಇಕ್ಬಾಲ್ ಅಹಮದ್, ಹಿರಿಯ ಸಾಹಿತಿ ಡಾ.ಕೆ.ಷರೀಪಾ, ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ಉಪಸ್ಥಿತರಿದ್ದರು.