ಹೊನ್ನಾಳಿ: ಹಿಂದೂ ಧರ್ಮದ ಭಾಗವಾಗಿರುವ ವೀರಶೈವ ಲಿಂಗಾಯತರನ್ನು ಒಡೆಯುವ ಹುನ್ನಾರ ನಡೆಸುವ ಕುಹಕಿಗಳಿಗೆ ತಡೆ ಹಾಕಬೇಕು ಎಂದು ಹೊಟ್ಯಾಪುರ ಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಲಿಂಗಾಯತ ಧರ್ಮ ಮಾಡಲು ಹೊರಟಿರುವುದರ ವಿರುದ್ಧ ಬುಧವಾರ ತಾಲೂಕಿನ ಸಮಸ್ತ ಭಕ್ತರ ಸಮ್ಮುಖದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ನೀಡಿದ ಬಳಿಕ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಮಠದ ಶ್ರೀಗಳಾದ ರಂಭಾಪುರಿ ಜಗದ್ಗುರುಗಳು, ಸಿದ್ದಗಂಗಾ ಮಠದ
ಶ್ರೀಗಳು, ಸುತ್ತೂರು ಮಠದ ಶ್ರೀಗಳು ಜಾತಿ ಭೇದ ಮರೆತು ಎಲ್ಲ ಜನಾಂಗಕ್ಕೆ ಒಳಿತು ಮಾಡಿ ಅದ್ಭುತ ಸಾಧನೆಗೈದಿದ್ದಾರೆ. ಲಿಂಗಾಯತ ಧರ್ಮ ಮಾಡಲು ಹೊರಟಿರುವ ಮಾತೆ ಮಹಾದೇವಿ ಅವರ ಸಾಧನೆ ಏನು ಎನ್ನುವುದನ್ನು ಸಮಾಜಕ್ಕೆ ಪ್ರಸ್ತುತ ಪಡಿಸಲಿ ಎಂದರು.
ಬಸವಣ್ಣನವರ ವಚನಗಳ ನಾಮಾಂಕಿತವನ್ನೇ ತಿರುಚಿರುವ ಮಾತೆ ಮಹಾದೇವಿ ಅವರಿಗೆ ಭಕ್ತಿ ಭಂಡಾರಿ ಬಸವಣ್ಣನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕೆಲ ಮಠಾ ಧೀಶರು ಮಾತೆ ಮಹಾದೇವಿಯೊಂದಿಗೆ ಶಾಮೀಲಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ರಾಂಪುರ ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತರನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿ ಅನಾವಶ್ಯಕವಾಗಿ ಸ್ವಾಮೀಜಿಗಳು ಬೀದಿಗಿಳಿವಂತೆ ಮಾಡಿರುವ ಸಮಾಜ ಘಾತುಕರ ಮಾತುಗಳಿಗೆ ಕಿವಿಗೊಡಬಾರದು. ಆದಿಕಾಲದಿಂದಲೂ ವೀರಶೈವ ಲಿಂಗಾಯತರು ಅವಿನಾಭಾವ ಸಂಬಂಧದಿಂದ ಬದುಕುತ್ತಿದ್ದಾರೆ. ಇದನ್ನು ಸಹಿಸದ ಕೆಲ ಸಮಾಜ ಘಾತುಕ ಶಕ್ತಿಗಳು ತಮ್ಮ ಆಟವನ್ನು ಶುರು ಮಾಡಿದ್ದಾರೆ. ಅವರ ಆಟ ನಡೆಯದು ಎಂದು ಹೇಳಿದರು.
ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜವನ್ನು ಒಂದುಗೂಡಿಸುವ ಕಾರ್ಯ ಮಾಡಬೇಕೆ ಹೊರತು ಒಡೆಯುವ ಕೆಲಸ ಮಾಡಬಾರದು. ನಮ್ಮ ಪರಂಪರೆ ಸಂಸ್ಕೃತಿ ಉಳಿಯಲು ಎಲ್ಲ ವೀರಶೈವ ಲಿಂಗಾಯತರು ಒಂದಾಗಿ ಬಾಳಬೇಕು ದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ, ಮುಖಂಡರಾದ ಡಿ.ಜಿ. ರಾಜಪ್ಪ, ಎಂ. ಶಿವಶಂಕರಯ್ಯ, ಶಾಂತರಾಜ್ ಪಾಟೀಲ್, ಎಚ್.ಎಂ. ಗಂಗಾಧರಯ್ಯ, ಅರಕೆರೆ ನಾಗರಾಜ್, ಹಿರೇಮಠದ ಬಸವರಾಜಪ್ಪ ಇತರರು ಇದ್ದರು.
ತಹಶೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೂ ಮುನ್ನಾ ಹಿರೇಕಲ್ಮಠದಿಂದ ತಾಲೂಕು ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲಾಯಿತು.