ನವದೆಹಲಿ: ಈಗ ಕೇವಲ ರಿಯಲ್ ಎಸ್ಟೇಟ್, ಡೆವಲಪರ್‌ಗಳು ಮಾತ್ರವಲ್ಲದೇ ತೆರಿಗೆ ತಪ್ಪಿಸುವಂಥ ಇತರೆ ಕ್ಷೇತ್ರಗಳನ್ನೂ ಟಾರ್ಗೆಟ್ ಮಾಡಿ ದಾಳಿ, ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಈಗ ನಮ್ಮ ಕಾರ್ಯಾಚರಣೆಗಳು ರಿಯಲ್ ಎಸ್ಟೇಟ್ ಕುಳಗಳಿಗೆ ಸೀಮಿತವಾಗಿಲ್ಲ. ಆರೋಗ್ಯಸೇವೆಯಿಂದ ಫಾರ್ಮಾದವರೆಗೆ, ಡೆವಲಪರ್‌ಗಳಿಂದ ಕೈಗಾರಿಕೆ, ಸೇವಾದಾರರು ಮತ್ತಿತರ ವಲಯಗಳ ಮೇಲೂ ನಾವು ಕಣ್ಣಿಟ್ಟಿದ್ದೇವೆ.
ಈ ಹಿಂದೆ ಎಂದೂ ತಲೆಕೆಡಿಸಿಕೊಳ್ಳದೇ ಇದ್ದಂಥ ವಲಯಗಳು ಅಂದರೆ ಗೇಮಿಂಗ್, ಅಸೆಟ್ ರಿಕನ್‌ಸ್ಟ್ರಕ್ಷನ್ ಕಂಪನಿಗಳು, ಬೆಟ್ಟಿಂಗ್ ಇತ್ಯಾದಿಗಳ ತೆರಿಗೆ ತಪ್ಪಿಸುವಿಕೆ ಮೇಲೂ ಗಮನ ನೆಟ್ಟಿದ್ದೇವೆ ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್ ಗುಪ್ತಾ ಹೇಳಿದ್ದಾರೆ.
ಇದೇ ವೇಳೆ, ಟಿಡಿಎಸ್‌ನ ಹೊಸ ನಿಬಂಧನೆಗಳ ಅನ್ವಯಿಸುವಿಕೆಗೆ ಸಂಬಂಧಿಸಿದ ಪ್ರಕ್ರಿಯೆ, ಒನ್ ಟೈಂ ಸೆಟಲ್‌ಮೆಂಟ್ ವಿಚಾರದಲ್ಲಿ ಬ್ಯಾಂಕುಗಳಿಗಿರುವ ಗೊಂದಲಗಳ ನಿವಾರಣೆಗಾಗಿ ಸದ್ಯದಲ್ಲೇ ಬ್ಯಾಂಕುಗಳಿಗೆ ಸುತ್ತೋಲೆಯೊಂದನ್ನು ರವಾನಿಸಲಾಗುವುದು ಎಂದು ಸಿಬಿಡಿಟಿ ಹೇಳಿದೆ.
ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸದಾಗಿ 194ಆರ್ ಎಂಬ ಸೆಕ್ಷನ್ ಅನ್ನು ಪರಿಚಯಿಸಲಾಗಿದ್ದು, ಜೂನ್‌ನಲ್ಲೇ ಆ ಕುರಿತು ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ಅದಕ್ಕೆ ಸಂಬಂಧಿಸಿರುವ ಗೊಂದಲ ನಿವಾರಣೆಗಾಗಿ ಸ್ಪಷ್ಟೀಕರಣ ಸುತ್ತೋಲೆ ಹೊರಡಿಸಲಾಗುವುದು ಎಂದೂ ತಿಳಿಸಿದೆ.