Advertisement

ಐಟಿ- ಬಿಟಿಗೆ ಬಳಕೆಯಾಗದ ಶೇ. 50 ಅನುದಾನ

03:45 AM Mar 09, 2017 | Team Udayavani |

ಬೆಂಗಳೂರು:ಮಾಹಿತಿ ತಂತ್ರಜ್ಞಾನ ರಫ್ತು ವಿಚಾರದಲ್ಲಿ  ಕರ್ನಾಟಕ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದ್ದರೂ 2016-17ನೇ ಸಾಲಿನ ಬಜೆಟ್‌ನಲ್ಲಿ ಈ ವಲಯದ ಅಭಿವೃದ್ಧಿಗೆ ಘೋಷಣೆ ಮಾಡಿದ ಬಹುತೇಕ ಕಾರ್ಯಕ್ರಮಗಳು ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ. ಅಷ್ಟೇಅಲ್ಲ, ಆಯವ್ಯಯದಲ್ಲಿ ಮೀಸಲಿಟ್ಟ ಅನುದಾನದ ಪೈಕಿ ಅರ್ಧದಷ್ಟು ಕೂಡ ಖರ್ಚು ಆಗಿಲ್ಲ.

Advertisement

ಬಜೆಟ್‌ನಲ್ಲಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಒಟ್ಟು 221.75 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ 2016ರ ಡಿಸೆಂಬರ್‌ ಅಂತ್ಯದವರೆಗೆ ಒಟ್ಟು ಖರ್ಚು ಮಾಡಿರುವ ಮೊತ್ತ ಕೇವಲ 113.01 ಕೋಟಿ ರೂ. ಶೇ.50ರಷ್ಟು ಮಾತ್ರ ವಿನಿಯೋಗಿಸಲು ಸಾಧ್ಯವಾಗಿದೆ.

ರಾಜ್ಯದ ಪಾಲು ಶೇ.40ರಷ್ಟು: ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಕರ್ನಾಟಕ ಈಗಾಗಲೇ ವಿಶ್ವದ ಗಮನ ಸೆಳೆದಿದ್ದು, ದೇಶದ ಐಟಿ ರಫ್ತು ಪ್ರಮಾಣದಲ್ಲಿ ನಮ್ಮ ರಾಜ್ಯದ ಪಾಲು ಶೇ.40ರಷ್ಟು ಇದೆ. ಸುಮಾರು 3500ಕ್ಕೂ ಹೆಚ್ಚು ಐಟಿ ಕಂಪನಿಗಳನ್ನು ಹೊಂದಿದ್ದು, ಬೆಂಗಳೂರು ನಗರದಲ್ಲೇ ಸುಮಾರು 500ಕ್ಕೂ ಹೆಚ್ಚು ಕಂಪನಿಗಳು ಜಾಗತಿಕ ಮಟ್ಟದಲ್ಲಿ ಹೊರಗುತ್ತಿಗೆ ಸೇವೆ ಒದಗಿಸುತ್ತಿದೆ. ಸುಮಾರು 85 ಚಿಪ್‌ ಡಿಸೈನಿಂಗ್‌ ಕಂಪನಿಗಳು ಮತ್ತು 350ಕ್ಕೂ ಹೆಚ್ಚು ಆರ್‌ಅಂಡ್‌ಡಿ ಕಂಪನಿಗಳಿದ್ದು, ಐಟಿ ಕ್ಷೇತ್ರದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ಉದ್ಯೋಗಾವಕಾಶವನ್ನು ಸೃಷ್ಟಿದೆ. ಆ ಮೂಲಕ, ರಾಜ್ಯದ ಒಟ್ಟು ಜಿಡಿಪಿ ಬೆಳವಣಿಗೆಯಲ್ಲಿ ನಮ್ಮ ಐಟಿ-ಬಿಟಿ ಕ್ಷೇತ್ರದ ಪಾಲು ಹೆಚ್ಚು. ಆದರೆ, ಸರ್ಕಾರ ಅದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ ಎಂಬುದು ಸರ್ಕಾರದ ಅಂಕಿ-ಅಂಶಗಳೇ ತಿಳಿಸುತ್ತವೆ.

ಬಜೆಟ್‌ನಲ್ಲಿ ಪ್ರಮುಖವಾಗಿ ನವೋದ್ಯಮ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಆದರೆ, ಸೂಕ್ತ ಮೂಲಸೌಕರ್ಯ, ಆರ್ಥಿಕ ನೆರವು ಕಲ್ಪಿಸದ ಕಾರಣ  ಆ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ.

ಘೋಷಣೆ ಸಾಕಾರವಾಗಿಲ್ಲ: ಬಜೆಟ್‌ನಲ್ಲಿ ನ್ಯೂ ಏಜ್‌ ಇನ್‌ಕುÂಬೇಷನ್‌ ನೆಟ್‌ವರ್ಕ್‌ನಡಿ ರಾಜ್ಯದ ಸ್ನಾತಕೋತ್ತರ ಮತ್ತು ವೃತ್ತಿಪರ ಕಾಲೇಜುಗಳಲ್ಲಿ ಒಟ್ಟು 10 ಇನ್‌ಕುÂಬೇಷನ್‌ ಸೆಂಟರ್‌ಗಳನ್ನು ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಬಾಗಲಕೋಟೆ ಮತ್ತು ಕಲಬುರ್ಗಿ ಐಟಿ ಪಾರ್ಕ್‌ಗಳಲ್ಲಿ ನವೋದ್ಯಮ ಸ್ಥಾಪನೆಗೆ ಅನುಕೂಲವಾಗುವಂತೆ ಇನ್‌ಕುÂಬೇಷನ್‌ ಸೆಂಟರ್‌ಗಳನ್ನು ಸ್ಥಾಪಿಸುವ ಬಗ್ಗೆಯೂ ಪ್ರಸ್ತಾಪ ಮಾಡಲಾಗಿತ್ತು. ಅಲ್ಲದೆ, ಬೆಳಗಾವಿ, ಬೀದರ್‌ ಮತ್ತು ವಿಜಯಪುರದಲ್ಲಿ ಐಟಿ ಪಾರ್ಕ್‌ಗೆ ಅನುಕೂಲವಾಗುವಂತೆ ಇನ್‌ಕುÂಬೇಟರ್‌ಗಳನ್ನು ಸ್ಥಾಪಿಸುವುದಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ, ಇದುವರೆಗೂ ಯಾವೊಂದು ಕೇಂದ್ರವೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಂಡಿಲ್ಲ. ಇತ್ತೀಚೆಗಷ್ಟೇ  ಈ ಕೇಂದ್ರಗಳ ಸ್ಥಾಪನೆ ಸಂಬಂಧ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ.

Advertisement

ಇನ್ನು, ರಾಜ್ಯದಲ್ಲಿ ಹಂತ ಹಂತವಾಗಿ ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಎಲೆಕ್ಟ್ರಾನಿಕ್ಸ್‌ ಸಿಸ್ಟಮ್‌ ಡಿಸೈನ್‌ ಮತ್ತು ಮ್ಯಾನುಫಾಕ್ಚರಿಂಗ್‌, ರೋಬೋಟಿಕ್ಸ್‌, ತ್ರಿಡಿ ಪ್ರಿಂಟಿಂಗ್‌, ನ್ಯಾನೋ ಟೆಕ್ನಾಲಜಿ, ಮೆಡಿಕಲ್‌ ಡಿವೈಸೆಸ್‌, ಹೆಲ್ತ್‌ ಟೆಕ್ನಾಲಜೀಸ್‌ ಮೊದಲಾದ ಸಂಭಾವ್ಯ ಕ್ಷೇತ್ರಗಳಲ್ಲಿ ನಾಲ್ಕು ಬಿಸಿನೆಸ್‌ ಇನ್‌ಕುÂಬೇಟರ್‌ಗಳನ್ನು ಸ್ಥಾಪಿಸುವ ಘೋಷಣೆಯೂ  ಇನ್ನೂ ಸಾಕಾರಗೊಂಡಿಲ್ಲ. 

ಶಾಲಾ ಮಕ್ಕಳಿಗೆ ವಿಜ್ಞಾನದ ಅರಿವು
ರಾಜ್ಯದ ಹಿಂದುಳಿದ ತಾಲೂಕುಗಳ 500 ಪ್ರೌಢಶಾಲೆಗಳಲ್ಲಿ “ಸೈನ್ಸ್‌ ಲ್ಯಾಬ್‌-ಇನ್‌ ಎ ಬಾಕ್ಸ್‌’ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಯೋಜನೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿತ್ತು. ಆ ಪ್ರಕಾರ, ಹೈದರಾಬಾದ್‌ನ ಅಗಸ್ತ್ಯ ಫೌಂಡೇಷನ್‌ ಸಹಯೋಗದಲ್ಲಿ “ಸೈನ್ಸ್‌ ಲ್ಯಾಬ್‌ ವಾನ್‌’ ಮೂಲಕ ರಾಜ್ಯದ ಹಿಂದುಳಿದ ಜಿಲ್ಲೆಗಳ ಸುಮಾರು 2095 ಪ್ರೌಢಶಾಲೆಗಳಲ್ಲಿ ಬಾಹ್ಯಾಕಾಶ ಸೇರಿದಂತೆ ವೈಜ್ಞಾನಿಕ ವಿಚಾರಗಳ ಬಗ್ಗೆ ಮಾಹಿತಿ, ಆಸಕ್ತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸಮಾಧಾನಕರ ವಿಷಯ.

ಇರುವುದನ್ನು ನಿರ್ಲಕ್ಷಿಸಿ, ಹೊಸತು ಘೋಷಣೆ!
ಬಜೆಟ್‌ನಲ್ಲಿ ನವೋದ್ಯಮ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೆಚ್ಚಿನ ಅನುದಾನ ಮೀಸಲಿಡಲಾಗಿತ್ತು. ಆದರೆ, ಬಜೆಟ್‌ನಲ್ಲಿ ಪ್ರಸ್ತಾಪಿಸಿರುವಂತೆ ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ನವೋದ್ಯಮ ಸ್ಥಾಪನೆಗೆ ಅನುಕೂಲವಾಗುವಂತೆ ಇನ್‌ಕುÂಬೇಷನ್‌ ಸೆಂಟರ್‌ಗಳು ಇನ್ನೂ ಕಾರ್ಯಾರಂಭಗೊಂಡಿಲ್ಲ.  ರಾಜ್ಯದಲ್ಲಿ ಈಗಾಗಲೇ ಸುಮಾರು 5000ಕ್ಕೂ ಹೆಚ್ಚು ನವೋದ್ಯಮಗಳು ಸ್ಥಾಪನೆಗೊಂಡಿವೆ.  ಆ ಪೈಕಿ ಮೂಲಸೌಕರ್ಯ ಕೊರತೆ ಹಾಗೂ ಇತರೆ ನೆರವು ಸಿಗದ ಕಾರಣ  ಶೇ.90ರಷ್ಟು ನವೋದ್ಯಮಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ನವೋದ್ಯಮದ ಬೆಳವಣಿಗೆಗೆ ಅಗತ್ಯ ಮೂಲ ಸವಲತ್ತು ಒದಗಿಸಬೇಕೇ ಹೊರತು ಮತ್ತಷ್ಟು ಹೊಸ ಸ್ಟಾರ್ಟ್‌ಅಪ್‌ಗ್ಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವುದರಿಂದ ಏನು ಪ್ರಯೋಜನವಾಗುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಪರಿಣತರು ಹೇಳುತ್ತಾರೆ.

– ಸುರೇಶ್‌ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next