Advertisement

ಈಶು ಅಶಿಸ್ತಿನ ರಾಗ;ಉಪಚುನಾವಣೆ ಸೋಲಿನ ಬೆನ್ನಲ್ಲೇ ಪಕ್ಷದಲ್ಲಿ ಅತೃಪ್ತಿ

03:45 AM Apr 21, 2017 | |

ಬೆಂಗಳೂರು: ಶಿಸ್ತಿನ ಪಕ್ಷ ಎಂದೇ ಹೆಸರಾಗಿರುವ ಬಿಜೆಪಿಯಲ್ಲೂ ಈಗ ಅಶಿಸ್ತು ಕಾಣಿಸಿಕೊಂಡಿದೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಗುರುವಾರ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಸ್ತಿನ ಪಕ್ಷ ಎಂದು ಹೆಸರಾಗಿದ್ದ ನಮ್ಮ ಪಕ್ಷದಲ್ಲೂ ಅಶಿಸ್ತು ಇದೆ.  ರಾಜ್ಯ ಬಿಜೆಪಿಯಲ್ಲಿ ಮೂಡಿದ್ದ ಭಿನ್ನಾಭಿಪ್ರಾಯ ಹೋಗಲಾಡಿಸಲು ಪದಾಧಿಕಾರಿಗಳ ಪಟ್ಟಿ ಪರಿಷ್ಕರಿಸಬೇಕು ಎಂಬ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಆದೇಶ ಪಾಲನೆಯಾಗದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ರಾಜ್ಯ ಬಿಜೆಪಿಯಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಫೆಬ್ರವರಿ 10ರೊಳಗೆ ಶಮನ ಮಾಡಲು ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ನಾಲ್ವರು ಸದಸ್ಯರ ಸಮಿತಿ ನೇಮಕ ಮಾಡಿದ್ದರೂ ಇದುವರೆಗೆ ಸಮಿತಿ ಒಂದೂ ಸಭೆ ನಡೆಸದೇ ಇರುವುದು ಅಶಿಸ್ತು ತೋರಿಸುತ್ತದೆ. ಇದು ನನಗೆ ಅತೀವ ಬೇಸರ ಉಂಟುಮಾಡಿದೆ ಎಂದು ಹೇಳಿದರು.

ಬಿಜೆಪಿ ಶಿಸ್ತಿನ ಪಕ್ಷ. ಬಿ.ಎಸ್‌.ಯಡಿಯೂರಪ್ಪ ಅವರು ಮುಂದಿನ ಮುಖ್ಯಮಂತ್ರಿ ಎಂದು ರಾಷ್ಟ್ರೀಯ ನಾಯಕರು ಘೋಷಿಸಿದ ಬಳಿಕ ಎಲ್ಲರೂ ಒಟ್ಟಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆ ಸ್ಥಾನಕ್ಕೆ ಬೇರೆ ಹೆಸರನ್ನು ಮನಸ್ಸಿನಲ್ಲಿ ಅಂದುಕೊಳ್ಳುವುದೂ ಅಶಿಸ್ತು ಎನ್ನುವ ಅಭಿಪ್ರಾಯ ನಮ್ಮ ಪಕ್ಷದವರದ್ದು ಎಂದು ಮಾರ್ಮಿಕವಾಗಿ ನುಡಿದರು.

ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಪಕ್ಷದಲ್ಲಿ ಅಶಿಸ್ತು ಮೂಡಿದ್ದು, ಇದು ಬೇಸರದ ಸಂಗತಿ. ಪಕ್ಷದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಹೋಗಲಾಡಿಸಲು ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡುವಂತೆ ಅಮಿತ್‌ ಶಾ ಅವರು ಕಳೆದ ಜನವರಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿದ್ದರು. ಫೆಬ್ರವರಿ 10ರೊಳಗೆ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದ್ದರು. ಆದರೆ, ಇದುವರೆಗೆ ಸಮಿತಿ ಒಮ್ಮೆಯೂ ಸಭೆ ಸೇರಿಲ್ಲ. ಇದು ಅಶಿಸ್ತಲ್ಲವೇ ಎಂದು ಪ್ರಶ್ನಿಸಿದರು.

Advertisement

ಈ ಕಾರಣದಿಂದಾಗಿಯೇ ಬಿಜೆಪಿಯ ನಿಷ್ಠಾವಂತ ಮುಖಂಡರು ಬುಧವಾರ ತುಮಕೂರಿನಲ್ಲಿ ಸಭೆ ನಡೆಸಿ ಪಕ್ಷ ಉಳಿಸಲು ಏ. 27ರಂದು ಬೆಂಗಳೂರಿನಲ್ಲಿ ಕಾರ್ಯಕರ್ತರ ಸಬೆ ನಡೆಸಲು ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಜಿಲ್ಲೆಗಳ ಸುಮಾರು ಒಂದು ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಬುಧವಾರ ತುಮಕೂರಿನಲ್ಲಿ ನಡೆದ ಸಭೆಯಲ್ಲಿ ತಾವು ಪಾಲ್ಗೊಂಡಿದ್ದನ್ನು ಸಮರ್ಥಿಸಿಕೊಂಡ ಅವರು, ಸೊಗಡು ಶಿವಣ್ಣ ಮತ್ತಿತರರು ನನ್ನನ್ನು ಸಭೆಗೆ ಆಹ್ವಾನಿಸಿದ್ದರು. ಅದರಂತೆ ಸಭೆಗೆ ಹೋಗಿದ್ದೆ. ಅವರೇನೂ ಭಿನ್ನಮತೀಯರಲ್ಲ. ಪಕ್ಷದ ನಿಷ್ಠಾವಂತ ಮುಖಂಡರು. ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋದವರೂ ಇದ್ದಾರೆ. ಪಕ್ಷದ ನಿಷ್ಠಾವಂತರಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಸಭೆ ಕರೆದಿದ್ದರು. ಅದೇ ರೀತಿ ಏ. 27ರಂದು ಕರೆದಿರುವ ಸಭೆಗೆ ಆಹ್ವಾನಿಸಿದರೂ ಹೋಗುತ್ತೇನೆ ಎಂದು ಹೇಳಿದ ಅವರು, ಈ ರೀತಿಯ ಚಟುವಟಿಕೆಗಳು ನಡೆಯಬಾರದು ಎಂಬ ಕಾರಣಕ್ಕಾಗಿಯೇ ತಕ್ಷಣ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಶಿಸ್ತಿನ ಪಕ್ಷದಲ್ಲಿ ಅಶಿಸ್ತು ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆ ಸೋಲಿನ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಕಾರಣಗಳೇನೇ ಇರಬಹುದು. ಸೋಲು ಅನುಭವಿಸಿದ್ದೇವೆ. ಈ ಕುರಿತು ಚರ್ಚಿಸಲು ಏ. 23ರಂದು ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಸಭೆ ಕರೆದಿದ್ದಾರೆ ಎಂದು ಹೇಳಿದರು.

ಬರ ನಿಭಾಯಿಸುವಲ್ಲಿ ಸರ್ಕಾರ ವಿಫ‌ಲ
ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಜನರಿಗೆ ಸ್ಪಂದಿಸುವಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ವಿಫ‌ಲವಾಗಿದೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದ್ದಾರೆ. ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ವಿತರಿಸಲು ಕೇಂದ್ರದಿಂದ ಹಣ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಇನ್ನೂ ಅದನ್ನು ರೈತರಿಗೆ ನೀಡಿಲ್ಲ. ಅಲ್ಲದೆ, ಮೇವು ಬ್ಯಾಂಕ್‌, ಗೋಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ್ದು, ಸರ್ಕಾರ ಹೇಳಿದಂತೆ 403 ಮೇವು ಬ್ಯಾಂಕ್‌ ಮತ್ತು 93 ಗೋಶಾಲೆ ಆರಂಭವಾಗಿಲ್ಲ. ಇನ್ನಾದರೂ ಸರ್ಕಾರ ಬರ ಪರಿಸ್ಥಿತಿ ನಿಭಾಯಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next