Advertisement

ಅರ್ಹರಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ

03:41 PM May 08, 2022 | Team Udayavani |

ಜಗಳೂರು: ಸರಕಾರ ನೀಡಿರುವ ಹಕ್ಕುಪತ್ರ ಮತ್ತು ಸಾಗುವಳಿ ಚೀಟಿಯನ್ನು ಅಡಮಾನ ಇಡುವಂತ ಕೆಲಸ ಮಾಡದೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಸ್‌.ವಿ. ರಾಮಚಂದ್ರ ಕರೆ ನೀಡಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕಂದಾಯ ಇಲಾಖೆ ಮತ್ತು ಸಮಾಜಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಫಲಾನುಭವಿಗಳಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ನಾನು ಕ್ಷೇತ್ರದ ಜನರಿಂದ ಆಶೀರ್ವಾದ ಮಾತ್ರ ಬಯಸುತ್ತೇನೆ. ನಾನೊಬ್ಬ ಸೇವಕನೇ ವಿನಃ ಮಾಲೀಕನಲ್ಲ. ವಿಧಾನಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಹೊಣೆಗಾರಿಕೆ ನನ್ನದು. ರೈತರನ್ನು ಕಚೇರಿಗಳಿಗೆ ಅಲೆದಾಡಿಸದೆ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸರ್ಕಾರದಿಂದ ಸಿಗುವ ಸೌಲಭ್ಯಗಳ ಹಕ್ಕುಪತ್ರಗಳು ತಾತ್ಕಾಲಿಕ ಕಷ್ಟಗಳಿಗೆ ಹಣಕ್ಕೆ ಮಾರಾಟವಾಗದೆ ಮುಂದಿನ ಪೀಳಿಗೆಗೆ ಆಸ್ತಿಯಾಗಬೇಕು. ಪೋಷಕರು ಆರ್ಥಿಕವಾಗಿ ಸಬಲರಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಭವಿಷ್ಯವನ್ನು ರೂಪಿಸಬೇಕು ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ತಾಲೂಕಿನ 9 ಕೆರೆಗಳು ಭರ್ತಿಯಾಗಿ 47 ಸಾವಿರ ಎಕರೆ ಪ್ರದೇಶ ಹನಿ ನೀರಾವರಿ ಸೌಲಭ್ಯ ಪಡೆಯಲಿದೆ. ಅಲ್ಲದೆ ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿದಿದ್ದು ಜೂನ್‌ ತಿಂಗಳೊಳಗೆ ಕ್ಷೇತ್ರದ 57 ಕೆರೆಗಳು ಭರ್ತಿಯಾಗಲಿವೆ. ತೊರೆಸಾಲು, ಎರೆಹಳ್ಳಿ ಕೆರೆಗೂ ನೀರು ಹರಿದು ದಶಕಗಳ ಬರದ ನಾಡಿನ ಹಣೆಪಟ್ಟಿ ಕಳಚಿ ಹಸಿರುನಾಡಾಗಿ ರೈತರ ಬದುಕು ಹಸನಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಸಂತೋಷಕುಮಾರ್‌ ಮಾತನಾಡಿ, ಸರಕಾರಿ ಜಮಿನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಕೊಂಡ 100 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. 94 (ಸಿ) ಅಡಿ 120 ಜನರಿಗೆ ಸಕ್ರಮೀಕರಣಕ್ಕೆ ಅನುಮತಿ ದೊರೆತಿದ್ದು, 62 ಜನರಿಗೆ ಹಕ್ಕುಪತ್ರ ಸಿದ್ಧಗೊಂಡಿವೆ. ಕಂದಾಯ ಇಲಾಖೆ ನೌಕರರಿಂದ ನೇರವಾಗಿ ಫಲಾನುಭವಿಗಳ ಮನೆಬಾಗಿಲಿಗೆ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಬಗರ್‌ಹುಕುಂ ಸಮಿತಿಯ ತಿಪ್ಪೇಸ್ವಾಮಿ, ಶೋಭಾ, ಹನುಮಂತಪ್ಪ, ಸುಧಿಧೀರ್‌, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಸೇರಿದಂತೆ ಫಲಾನುಭವಿಗಳು ಭಾಗವಹಿಸಿದ್ದರು.

ಪ್ರಸಕ್ತ ಸಾಲಿನಿಂದ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು. ಕೊಳವೆಬಾವಿ ಕೊರೆಸಿ ಪಂಪ್‌, ಮೋಟಾರ್‌ ಖರೀದಿಸಲು ಸರ್ಕಾರ ಆದೇಶಿಸಿದೆ. -ಎಸ್‌.ವಿ. ರಾಮಚಂದ್ರ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next