ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಬರಪೀಡಿತ ಎಂದು ಗುರುತಿಸಲಾಗಿರುವ 65 ತಾಲೂಕುಗಳನ್ನು ತಕ್ಷಣ ಬರಪೀಡಿತ ಪ್ರದೇಶಗಳು ಎಂದು ಅಧಿಕೃತ ಅಧಿಸೂಚನೆ ಹೊರಡಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಬುಧವಾರ ತಾಕೀತು ಮಾಡಿದೆ.
ಈ ಕುರಿತಂತೆ ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ರಾಜ್ಯದಲ್ಲಿ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ 2018ರ ಡಿ.29ಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆರು ತಿಂಗಳ ಮಟ್ಟಿಗೆ ಬರಪೀಡಿತ ಪ್ರದೇಶಗಳನ್ನು ಘೋಷಿಸಲಾಗುತ್ತದೆ. ಬರ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, 65 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಬೇಕಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆಗ, ಆರು ತಿಂಗಳ ಮಟ್ಟಿಗೆ ಬರಪೀಡಿತ ಪ್ರದೇಶಗಳ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದಾದರೆ, 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ 2018ರ ಡಿ.29ರಂದು ಹೊರಡಿಸಿದ್ದ ಅಧಿಸೂಚನೆಯ ಅವಧಿ ಈಗ ಮುಗಿದು ಹೋಗಿದೆ. ಹೊಸ ಅಧಿಸೂಚನೆ ಹೊರಡಿಸಿಲ್ಲ. 65 ತಾಲೂಕುಗಳನ್ನು ಗುರುತಿಸಲಾಗಿದೆಯಷ್ಟೇ, ಆ ಬಗ್ಗೆಯೂ ಇನ್ನೂ ಅಧಿಸೂಚನೆ ಹೊರಬಿದ್ದಿಲ್ಲ. ಹಾಗಾದರೆ, ರಾಜ್ಯದಲ್ಲಿ ಬರಗಾಲ ಇಲ್ಲ ಎಂದು ಅರ್ಥೈಸಬೇಕೇ ಎಂದು ಸರ್ಕಾರದ ಪರ ವಕೀಲರನ್ನು ಮುಖ್ಯ ನ್ಯಾಯಮೂರ್ತಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ಈ ವೇಳೆ ವಿಚಾರಣೆಗೆ ಖುದ್ದು ಹಾಜರಾಗಿದ್ದ ಪಶುಸಂಗೋಪನಾ ಇಲಾಖೆ ಪ್ರಭಾರ ಕಾರ್ಯದರ್ಶಿ ಪಿ. ಮಣಿವಣ್ಣನ್, ಬರಪೀಡಿತ ಪ್ರದೇಶಗಳನ್ನು ಕಂದಾಯ ಇಲಾಖೆ ಘೋಷಿಸುತ್ತದೆ. ಅದಕ್ಕೂ ಮೊದಲು, ವಿಪತ್ತು ನಿರ್ವಹಣಾ ಇಲಾಖೆ, ಹವಾಮಾನ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ 56 ತಾಲೂಕುಗಳ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಇದಕ್ಕೆ ಅಸಮಧಾನಗೊಂಡ ಮುಖ್ಯನ್ಯಾಯಮೂರ್ತಿ, ಇದೆಲ್ಲ ಮೊದಲೇ ಮಾಡಿಕೊಳ್ಳಬೇಕಾದ ಕೆಲಸ, ಅಷ್ಟಕ್ಕೂ ರಾಜ್ಯ ಸರ್ಕಾರ “ಆಗಸ್ಟ್ ಶುಭಗಳಿಗೆ’ ಏಕೆ ಕಾಯುತ್ತಿದೆ? 65 ಬರ ಪೀಡಿತ ಪ್ರದೇಶಗಳ ಬಗ್ಗೆ ತಕ್ಷಣ ಅಧಿಸೂಚನೆ ಹೊರಡಿಸಬೇಕು. ಅಲ್ಲದೆ ಪ್ರತಿಯೊಂದು ತಾಲೂಕಿಗೆ ಒಂದರಂತೆ ಜಾನುವಾರು ಶಿಬಿರಗಳನ್ನು ಸ್ಥಾಪಿಸಬೇಕು ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿದರು.