ಕಲಬುರಗಿ: ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ಬೌತಿಕವಾಗಿ ವಾಹನ ಚಾಲನೆ ಪರವಾನಗಿ ಪತ್ರಗಳ ವಿತರಣೆ ನಿಲ್ಲಿಸಿರುವ ಕ್ರಮ ಖಂಡಿಸಿ ಜಿಲ್ಲಾ ವಾಹನ ಚಾಲನಾ ಶಾಲೆಗಳ ಮಾಲೀಕರ ಸಂಘದಿಂದ ಗುರುವಾರ ನಗರದ ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಆರ್‌ಟಿಒ ಕಚೇರಿಯಲ್ಲಿ ಕಲಿಕಾ ಪರವಾನಿಗೆ (ಎಲ್‌ಎಲ್ ಆರ್) ಮತ್ತು ನವೀಕರಣ ಪರವಾನಿಗೆ ಪತ್ರಗಳನ್ನು ಆನ್ ಲೈನ್ ಮೂಲಕ ಸಾರ್ವಜನಿಕವಾಗಿ ನೀಡಲಾಗಿತ್ತು. ಆದರೆ, ಇದನ್ನು ಬುಧವಾರದಿಂದ ಏಕಾಏಕಿ ನಿಲ್ಲಿಸಲಾಗಿದೆ. ಹೊರಗಡೆ ಖಾಸಗಿಯಾಗಿ ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಸಾಕಷ್ಟು ಸಮಸ್ಯೆಗಳು ಆಗುತ್ತಿವೆ ಎಂದು ಆರೋಪಿಸಿದರು.
ಕಚೇರಿಯಲ್ಲಿ ಪರವಾನಗಿ ಕೊಡುವುದನ್ನು ನಿಲ್ಲಿಸುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ಹಠಾತ್ ಸ್ಥಗಿತಗೊಳಿಸಲಾಗಿದೆ. ಹೊರಗೆ ಅರ್ಜಿ ಸಲ್ಲಿಸಲು ಹೋದರೆ ಆನ್ ಲೈನ್‌ನಲ್ಲಿ ಮುಖದ ಚಿತ್ರ ಸರಿಯಾಗಿ ಸೆರೆ ಹಿಡಿಯುತ್ತಿಲ್ಲ ಮತ್ತು ಶುಲ್ಕ ಪಾವತಿ ಆಗುತ್ತಿಲ್ಲ ಎಂದು ದೂರಿದರು.
ಆಧಾರ್ ಸಂಖ್ಯೆ ಜೋಡಣೆಯಲ್ಲಿ ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ವಿಳಾಸಗಳ ಸಮಸ್ಯೆ ಕಂಡು ಬರುತ್ತಿದೆ. ಭರ್ತಿ ಮಾಡಿದ ಅರ್ಜಿಯನ್ನು ಹಾಗೆ ಉಳಿಸಿಕೊಳ್ಳಲು (ಪೆಂಡಿಂಗ್) ಆಗುತ್ತಿಲ್ಲ. ಹೀಗಾಗಿ ಶುಲ್ಕದ ಹಣ ಕಡಿತವಾದರೂ ಅದೇ ಅರ್ಜಿ ಮುಂದುವರಿಸಲು ಆಗದೇ ನಷ್ಟ ಅನುಭವಿಸುವಂತೆ ಆಗಿದೆ. ಆದ್ದರಿಂದ ಪರವಾನಗಿಯನ್ನು ಕಚೇರಿಯಲ್ಲೇ ಭೌತಿಕವಾಗಿ ನೀಡುವುದನ್ನು ಪುನಾರಂಭಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜತೆಗೆ ಅರ್ಜಿದಾರರು ಪರವಾನಗಿಗಾಗಿ ವಿಡಿಯೋವೊಂದನ್ನು ನೋಡಬೇಕಾಗಿ ಬರುತ್ತದೆ. ಈ ವಿಡಿಯೋ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಇದೆ. ಸಾಕಷ್ಟು ಜನರಿಗೆ ಇಂಗ್ಲಿಷ್, ಹಿಂದಿ ಅರ್ಥವಾಗೋದಿಲ್ಲ. ಇದನ್ನು ಕನ್ನಡ ಭಾಷೆಯಲ್ಲೂ ಭಿತ್ತರಿಸಬೇಕೆಂದು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಅಧ್ಯಕ್ಷ ಸಂದೀಪ ಪಾಟೀಲ, ಪ್ರಮುಖರಾದ ಜಾಫರ್ ಅಲಿ, ಅಲೀಂ ಇನಾಂದಾರ, ಮಹೇಶ, ಮಂಜುನಾಥ, ಯುವರಾಜ ಟೆಂಗಳಿ, ಅಹ್ಮದ್, ಬುರನ್ ಖಾನ್ ಇದ್ದರು.