ಪಡುಬಿದ್ರಿ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಭಾಗೀಯ ಕಚೇರಿಯ ಹಿರಿಯ ಪರಿಸರ ಅಧಿಕಾರಿಯಿಂದ ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೋಡೀಸೆಲ್ ಹಾಗೂ ಪಾಮ್ ಆಯಿಲ್ ಉತ್ಪಾದನ ಘಟಕಕ್ಕೆ ಪರಿಸರ ಮಾಲಿನ್ಯ(33ಎ) ಹಾಗೂ ವಾಯು ಮಾಲಿನ್ಯ ನಿಯಂತ್ರಣ(34)ಕ್ಕೆ ಕಂಪೆನಿಯು ಕೈಗೊಳ್ಳದಿರುವ ಕ್ರಮಗಳ ಕುರಿತಾದ ಕಾರಣ ಕೇಳಿ, ನಿರ್ದೇಶಿಸಿ ಆ. 5ರಂದು ನೋಟಿಸ್ ಜಾರಿಗೊಳಿಸಿದೆ.
ಘಟಕದ ವಿರುದ್ಧ ಕೇಳಿ ಬಂದ ದೂರಗಳ ಹಿನ್ನೆಲೆಯಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಪರಿಸರ ಇಲಾಖೆ ಮತ್ತಿತರ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಪಟ್ಟಿಮಾಡಿಕೊಂಡಿರುವ ಅಂಶಗಳು, ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿ ತಮ್ಮ ಭೇಟಿ ವೇಳೆ ಗಮನಿಸಿರುವ ಅಂಶ, ಜಿಲ್ಲಾಧಿಕಾರಿ ನೀಡಿರುವ ಸೂಚನೆಗಳು ಹಾಗೂ ಸಾರ್ವಜನಿಕರು, ಪಲಿಮಾರು ಗ್ರಾ. ಪಂ. ಉಲ್ಲೇಖೀಸಿದ ಅಂಶಗಳನ್ನು ಆಧರಿಸಿ ಎಂ 11 ಕೈಗಾರಿಕಾ ಘಟಕದಿಂದ ಸ್ಪಷ್ಟನೆ ಹಾಗೂ ಕೈಗೊಳ್ಳಲಾದ ವಿವರಗಳ ಬಗ್ಗೆ ಉತ್ತರವನ್ನು 15ದಿನಗಳ ಒಳಗಾಗಿ ನೀಡುವಂತೆ ಶಾಸಕರು ಸೂಚಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಪರವಾನಿಗೆಯನ್ನು ಪುನರ್‌ವಿಮರ್ಶಿಸುವ ಮತ್ತು ಮೆಸ್ಕಾಂ ಮೂಲಕ ವಿದ್ಯುತ್ ಸಂಪರ್ಕವನ್ನು ಯಾಕೆ ನಿಲ್ಲಿಸಬಾರದು ಎಂಬುದಕ್ಕೆ ಸಕಾರಣವಾಗಿ ಉತ್ತರವನ್ನು ಕೇಳಿ ಈ ನೋಟಿಸ್ ಅನ್ನು ಎಂ 11 ಘಟಕಕ್ಕೆ ಜಾರಿಗೊಳಿಸಿದೆ.