Advertisement

ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಿ

11:36 PM Feb 18, 2020 | Lakshmi GovindaRaj |

ವಿಧಾನ ಪರಿಷತ್ತು: “ಸರ್ಕಾರದ ಖಜಾನೆಯಲ್ಲಿರುವ ಹಣ ಮತ್ತು ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಡಿ ಬರಬೇಕಾದ ಅನುದಾನದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶ್ವೇತಪತ್ರ ಹೊರಡಿಸಲಿ’ ಎಂದು ಕಾಂಗ್ರೆಸ್‌ ಸದಸ್ಯ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು.

Advertisement

ಮಂಗಳವಾರ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣೆ ಪ್ರಸ್ತಾವದ ಮೇಲೆ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ, ಬರ ಮತ್ತು ನೆರೆ ಪರಿಹಾರ, ಜಿಎಸ್‌ಟಿಯಲ್ಲಿ ರಾಜ್ಯದ ಪಾಲು, ಬೆಳೆಹಾನಿ ಪರಿಹಾರ ಸೇರಿ ಕೇಂದ್ರದಿಂದ ಬರಬೇಕಾದ ಹಣ ಎಷ್ಟು?. ಇನ್ನೂ ಎಷ್ಟು ಬಾಕಿ ಉಳಿಸಿಕೊಂಡಿದೆ? ಸರ್ಕಾರದ ಖಜಾನೆಯಲ್ಲಿ ಸದ್ಯಕ್ಕೆ ಇರುವ ಹಣ ಎಷ್ಟು? ಇದೆಲ್ಲದರ ಕುರಿತು ಶ್ವೇತಪತ್ರ ಹೊರಡಿಸಬೇಕೆಂದರು.

ಗಮನ ಸೆಳೆಯಿರಿ: ದೇಶದಲ್ಲಿ 3ನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕ. ಬಿಜೆಪಿ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ರಾಜ್ಯದಲ್ಲಿರುವುದೂ ಅದೇ ಬಿಜೆಪಿ. ಆದರೆ, ಉಪನಗರ ರೈಲು ಮತ್ತಿತರ ಯೋಜ ನೆಗಳಿಗೆ ಪುಡಿಗಾಸು ನೀಡಲಾಗುತ್ತಿದೆ. ಅನು ದಾನ ನೀಡಲು ಕೇಂದ್ರ ಮೀನಮೇಷ ಎಣಿಸುತ್ತಿ ರುವುದು ಸರಿ ಅಲ್ಲ. ಸ್ವತಃ ಪ್ರಧಾನಿ ಮೋದಿ ಸಮ್ಮುಖದಲ್ಲಿಯೇ ಅನುದಾನ ನೀಡದಿರುವ ಬಗ್ಗೆ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದೇ ತಪ್ಪಾ ಎಂದು ತೀಕ್ಷ್ಣವಾಗಿ ಕೇಳಿದ ಸಿ.ಎಂ.ಇಬ್ರಾಹಿಂ, “ಶ್ವೇತಪತ್ರ ಹೊರಡಿಸಿದ ನಂತರ ಕೇಂದ್ರದ ಅನುದಾನಕ್ಕಾಗಿ ಅಗತ್ಯಬಿದ್ದರೆ ಸರ್ವಪಕ್ಷ ನಿಯೋಗ ಕೂಡ ಕೊಂಡೊಯ್ದು, ಸರ್ಕಾರದ ಗಮನಸೆಳೆಯಲಿ. ಇದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು’ ಎಂದರು.

ಮಂಗ್ಳೂರಲ್ಲಿರೋದು ಬಿಎಸ್‌ವೈ ಸರ್ಕಾರ ಅಲ್ಲ!: ಮಂಗಳೂರಿನಲ್ಲಿ ಇರು ವುದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರವಲ್ಲ; ಅಲ್ಲಿಯದ್ದೇ ಒಂದು ಬೇರೆ ಸರ್ಕಾರವಿದೆ ಎಂದು ಕಾಂಗ್ರೆಸ್‌ ಸದಸ್ಯ ಸಿ.ಎಂ.ಇಬ್ರಾಹಿಂ ಟೀಕಿಸಿದರು.

Advertisement

ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣೆ ಪ್ರಸ್ತಾವದ ಮೇಲಿನ ಚರ್ಚೆ ವೇಳೆ ಮಾತನಾಡಿ, “ಸಿಎಎ ವಿರುದ್ಧ ಕಲಬುರಗಿ, ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆ ಪ್ರತಿಭಟನೆಗಳು ನಡೆದಿವೆ. ಎಲ್ಲಿಯೂ ಗಲಾಟೆ ಆಗಲಿಲ್ಲ. ಆದರೆ, ಮಂಗ ಳೂರಿನಲ್ಲಿ ಮಾತ್ರ ಗಲಾಟೆ ಜತೆಗೆ ಗೋಲಿಬಾರ್‌ ಆಯಿತು. ಏಕೆಂದರೆ, ಅಲ್ಲಿರುವುದು ಯಡಿಯೂರಪ್ಪ ಅವರ ಸರ್ಕಾರವಲ್ಲ. ಬೇರೆಯೇ ಸರ್ಕಾರ ಇದೆ’ ಎಂದು ತೀಕ್ಷ್ಣವಾಗಿ ಹೇಳಿದರು.

ಕಲ್ಯಾಣ ಕರ್ನಾಟಕ ಹೆಸರಿಟ್ಟರೆ ಸಾಕೆ?: ಕೃಷಿ ಸಾಲದ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪ ಇಲ್ಲ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವಧಿಯಲ್ಲಿ ನೀಡಿದ್ದನ್ನು ಪ್ರಸ್ತುತ ಸರ್ಕಾರ ನೀಡಿದೆ ಎಂದು ಸುಳ್ಳು ಹೇಳಿಸಲಾಗಿದೆ. ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟರೆ ಸಾಲದು. ಆ ನಿಟ್ಟಿನಲ್ಲಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸಬೇಕು. ಪ್ರಧಾನಮಂತ್ರಿ ಫ‌ಸಲ್‌ಬಿಮಾ ಯೋಜನೆ ಸಂಪೂರ್ಣ ವಿಫ‌ಲವಾಗಿದ್ದು ಅದರ ವಿಮಾ ಮೊತ್ತ ಖಾಸಗಿ ವಿಮಾ ಕಂಪನಿಗಳಿಗೆ ಹೋಗುತ್ತಿದೆ ಎಂದು ಜೆಡಿಎಸ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next