ಹೊಸದಿಲ್ಲಿ: ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಕ್ರೀಡಾಪಟು ಎಂಬ ಹಿರಿಮೆಯ ಶೂಟರ್ ಅಭಿನವ್ ಬಿಂದ್ರಾ ಅವರ ಸಾಧನೆಯ ತುರಾಯಿಗೆ ಮತ್ತೂಂದು ಗರಿ ಮೂಡಿದೆ. ಶುಕ್ರವಾರ ಅವರಿಗೆ ಪ್ರತಿಷ್ಠಿತ “ಐಎಸ್‌ಎಸ್‌ಎಫ್
ಬ್ಲೂ ಕ್ರಾಸ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
“ಬ್ಲೂ ಕ್ರಾಸ್’ ಎಂಬುದು “ಇಂಟರ್‌ನ್ಯಾಶನಲ್ ಶೂಟಿಂಗ್ ನ್ಪೋರ್ಟ್ಸ್ ಫೆಡರೇಶನ್’ (ಐ.ಎಸ್.ಎಸ್.ಎಫ್.) ನೀಡುವ ಅತ್ಯುನ್ನತ ಗೌರವವಾಗಿದೆ. ಈ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಶೂಟರ್ ಎಂಬುದು ಅಭಿನವ್ ಬಿಂದ್ರಾ ಪಾಲಿನ ಹೆಗ್ಗಳಿಕೆ.
“ಐಎಸ್‌ಎಸ್‌ಎಫ್ನ ಈ ಪರಮೋಚ್ಚ ಪ್ರಶಸ್ತಿಯನ್ನು ವಿನೀತನಾಗಿ ಸ್ವೀಕರಿಸುತ್ತೇನೆ. ಶೂಟಿಂಗ್ ಮತ್ತು ಶೂಟಿಂಗ್ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಲು ಇದೊಂದು ಅಪೂರ್ವ ಅವಕಾಶ ಎಂದು ಭಾವಿಸುತ್ತೇನೆ’ ಎಂಬುದಾಗಿ ಅಭಿನವ್ ಬಿಂದ್ರಾ ಸಂತಸ ವ್ಯಕ್ತಪಡಿಸಿದ್ದಾರೆ.
2008ರ ಬೀಜಿಂಗ್ ಒಲಿಂಪಿಕ್ಸ್ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಬಿಂದ್ರಾ ಬಂಗಾರಕ್ಕೆ ಕೊರಳೊಡ್ಡಿ ಇತಿಹಾಸ ನಿರ್ಮಿಸಿದ್ದರು. ಖೇಲ್ ರತ್ನ (2001), ಅರ್ಜುನ (2000), ಪದ್ಮ ಭೂಷಣ (2009) ಪ್ರಶಸ್ತಿಗಳಿಗೂ ಭಾಜನರಾಗಿದ್ದರು.