Advertisement

ISRO: ಪೀಣ್ಯ ಕೈಗಾರಿಕೆಗೆ ಇಸ್ರೋ ಕೊಟ್ಟ ಕಾಸಿನ ಬಲ

11:28 PM Aug 27, 2023 | Team Udayavani |

ಬೆಂಗಳೂರು: ಜಗತ್ತನ್ನು ಬೆರಗು ಗೊಳಿಸಿರುವ ಮಹತ್ವಾಕಾಂಕ್ಷಿ ಚಂದ್ರಯಾನ -3ರ ಯಶಸ್ಸಿನಿಂದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಭಾರೀ ಲಾಭವಾಗಿದೆ. 80 ಕೋಟಿ ರೂ.ಗಳಿಂದ 100 ಕೋಟಿ ರೂ. ವರೆಗೆ ವ್ಯಾಪಾರ ಕುದುರಿದೆ. ಯೋಜನೆ ಯಶಸ್ಸು ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಕ್ಷೇತ್ರ ಸಂಬಂಧಿ ಕ್ಷೇತ್ರದ ಕೈಗಾರಿಕೆಗಳಿಗೆ ಅವಕಾಶಗಳ ಹೆಬ್ಟಾಗಿಲು ತೆರೆದಿಟ್ಟಿದೆ.

Advertisement

ಚಂದ್ರಯಾನ-3 ಉಡ್ಡಯನ ವಾಹನ ಪಿಎಸ್‌ಎಲ್‌ವಿಯಿಂದ ಲ್ಯಾಂಡರ್‌ ವಿಕ್ರಂ, ರೋವರ್‌ ಪ್ರಗ್ಯಾನ್‌ ವರೆಗೆ ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾನಾ ಪ್ರಕಾರದ ಬಿಡಿಭಾಗಗಳು ಪೂರೈಕೆಯಾಗಿವೆ. ಒಟ್ಟಾರೆ ಈ ಉದ್ದೇಶಿತ ಯೋಜನೆಗೆ 500ಕ್ಕೂ ಹೆಚ್ಚು ಕಂಪೆನಿಗಳು ಹತ್ತುಹಲವು ರೀತಿಯಲ್ಲಿ ಉಪಕರಣಗಳನ್ನು ಪೂರೈಸಿವೆ.

615 ಕೋಟಿ ರೂ. ವೆಚ್ಚದ ಯೋಜನೆಗೆ ಲ್ಯಾಂಡರ್‌ ಕಾಲುಗಳು, ಕೆಮರಾ, ಮೆಕ್ಯಾನಿಕಲ್‌ ಸಬ್‌ ಸಿಸ್ಟಮ್‌ಗಳು, ಕಮ್ಯುನಿಕೇಷನ್‌ ಉಪಕರಣಗಳು, ಶೀಟ್‌ ಮೆಟಲ್‌ ಕಾಂಪೊನೆಂಟ್‌ಗಳು ಸೇರಿದಂತೆ ನೂರಾರು ಬಿಡಿಭಾಗಗಳು ಪೀಣ್ಯದಲ್ಲಿರುವ ಸಣ್ಣ-ಪುಟ್ಟ ಕೈಗಾರಿಕೆಗಳಿಂದ ಪೂರೈಕೆ ಆಗಿವೆ. ಅದರ ವಹಿವಾಟಿನ ಮೊತ್ತ 80ರಿಂದ 100 ಕೋಟಿ ರೂ. ಆಗಿರಬಹುದು ಎಂದು ಕೈಗಾರಿಕೋದ್ಯಮಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಅದು ಒಟ್ಟಾರೆ ಯೋಜನ ವೆಚ್ಚದ ಶೇ. 12ರಿಂದ 14ರಷ್ಟು ಆಗುತ್ತದೆ.

200 ಬಿಡಿಭಾಗಗಳು
ಚಂದ್ರಯಾನ-3ರಲ್ಲಿ ಉಡ್ಡಯನ ವಾಹನಕ್ಕೆ 200 ಬಿಡಿಭಾಗಗಳು ಪೂರೈಕೆಯಾಗಿವೆ ಎಂದು ಪುಷ್ಪಕ್‌ ಪ್ರಾಡಕ್ಟ್$Õ ಇಂಡಿಯಾ ಪ್ರೈ.ಲಿ. ಸಂಸ್ಥಾಪಕ ಪುಷ್ಪಕ್‌ ಪ್ರಕಾಶ್‌ ಹೇಳಿದ್ದಾರೆ. ಅವುಗಳಲ್ಲಿ ಅಲ್ಯುಮಿನಿಯಂ ಸ್ಟಿಫ್ನರ್‌ (ಗಟ್ಟಿಕಾರಕ)ಗಳು, ಲ್ಯಾಂಡರ್‌ಗೆ ಬಂಗಾರ ಮತ್ತು ಬೆಳ್ಳಿ ವರ್ಣದ ಪ್ಲೇಟಿಂಗ್‌ಗಳು, ಥರ್ಮಲ್‌ ಪ್ಲೇಂಟಿಂಗ್‌ ಸೇರಿದಂತೆ 200ಕ್ಕೂ ಅಧಿಕ ಪ್ರಕಾರದ ಬಿಡಿಭಾಗಗಳನ್ನು ಪೂರೈಕೆ ಮಾಡಿದ್ದೇವೆ ಎಂದರು. ಚಂದ್ರಯಾನ-3ರ ಯಶಸ್ಸಿನಿಂದ ಮತ್ತಷ್ಟು ಅವಕಾಶಗಳು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಣ್ಣ, ಅತಿಸಣ್ಣ ಕೈಗಾರಿಕೆಗಳಿಗೆ ತೆರೆದುಕೊಳ್ಳಲಿದೆ ಎಂದರು.

ಭವಿಷ್ಯದ ಯೋಜನೆ -ಅವಕಾಶಗಳು
ಮುಂಬರುವ ದಿನಗಳಲ್ಲಿ ಇಸ್ರೋ ಗಗನಯಾನ 1, 2 ಮತ್ತು 3, ಆದಿತ್ಯ ಎಲ್‌-1, ನಿಸಾರ್‌, ಚಂದ್ರಯಾನ-4 ಸೇರಿದಂತೆ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದೆ. ಅವೆಲ್ಲವುಗಳಿಗೆ ಅಗತ್ಯವಿರುವ ಸಾವಿರಾರು ಬಿಡಿಭಾಗಗಳಿಗಾಗಿ ಒಂದಿಲ್ಲೊಂದು ರೀತಿಯಲ್ಲಿ ಇಸ್ರೋ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳನ್ನು ಅವಲಂಬಿಸಬೇಕಾಗುತ್ತದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇದು ಉದ್ಯಮಗಳ ಬೆಳವಣಿಗೆಗೆ ಅನುಕೂಲ ಆಗಲಿದೆ. ತಯಾರಿಕೆ, ಮಷಿನ್‌ ಟೂಲ್ಸ್‌, ರಕ್ಷಣ ವಲಯ, ಏರೋಸ್ಪೇಸ್‌ ಸೇರಿದಂತೆ ನಾನಾ ಪ್ರಕಾರಗಳ ಕೈಗಾರಿಕೆಗಳು ವಿಶಿಷ್ಟ ಛಾಪುಮೂಡಿಸಿವೆ.

Advertisement

ಸ್ಪೇಸ್‌ ಟೂರಿಸ್‌ಂ, ಸ್ಪೇಸ್‌ ಅಡ್ವೆಂಚರ್‌, ಸ್ಪೇಸ್‌ ಹ್ಯಾಬಿಟೇಷನ್‌ ವೇಗವಾಗಿ ಬೆಳೆಯುತ್ತಿರುವುದರಿಂದ ಸಹಜವಾಗಿ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಲಿದೆ. ಇದು ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುವುದರಲ್ಲಿ ಎರಡು ಮಾತಿಲ್ಲ.
– ಎ.ಎಸ್‌. ಕಿರಣ್‌ ಕುಮಾರ್‌, ಇಸ್ರೋದ ನಿವೃತ್ತ ಅಧ್ಯಕ್ಷ

“ವಿಕ್ರಂ” ಕಾಲುಗಳ ಪೂರೈಕೆ
ಲ್ಯಾಂಡರ್‌ ವಿಕ್ರಮ್‌ಗೆ ಅಳವಡಿಸಲಾಗಿರುವ ಕಾಲುಗಳು ಪೀಣ್ಯದಿಂದ ಪೂರೈಕೆಯಾದದ್ದು ಎಂದು ಡುಕಾಂ ಏರೋಸ್ಪೇಸ್‌ ರಾಷ್ಟ್ರೀಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಯೋಗೀಶ್‌ ಹೆಮ್ಮೆಯಿಂದ ಹೇಳುತ್ತಾರೆ. ಚಂದ್ರಯಾನ-3 ಯೋಜನೆಗೇ ಅಂದಾಜು ನೂರು ವಿವಿಧ ಪ್ರಕಾರದ ಬಿಡಿಭಾಗಗಳನ್ನು ಇಸ್ರೋಗೆ ಸರಬರಾಜು ಮಾಡಿದ್ದೇವೆ ಎಂದಿದ್ದಾರೆ. ನಾವು ಮೂರು ದಶಕಗಳಿಂದ ಬಾಹ್ಯಾಕಾಶ ವಲಯಕ್ಕೆ ನಾನಾ ಪ್ರಕಾರದ ಉಪಕರಣಗಳನ್ನು ಪೂರೈಕೆ ಮಾಡುತ್ತಿದ್ದೇವೆ. ಇಸ್ರೋದಿಂದ ಉಡಾವಣೆಯಾದ ಚಂದ್ರಯಾನ-1, 2 ಮತ್ತು 3 ಹಾಗೂ ಮಂಗಳಯಾನಕ್ಕೂ ಉಪಕರಣಗಳನ್ನು ಪೂರೈಸಿದ್ದೇವೆ ಎಂದರು. ಮೂಲತಃ ಪೀಣ್ಯ ಕೈಗಾರಿಕೆ ಪ್ರದೇಶವು ಮೆಕ್ಯಾನಿಕಲ್‌ ಹಬ್‌ ಎಂದು ಹೇಳಿದ ಅವರು, ಅಲ್ಲಿ ಬಾಹ್ಯಾಕಾಶ, ರಕ್ಷಣ ವಲಯ, ಸಾಮಾನ್ಯ ಆವಶ್ಯಕತೆಗಳನ್ನು ಪೂರೈಸುವ ಕಂಪೆನಿಗಳು ಇವೆ ಎಂದರು.

 ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next