Advertisement

ಇಸ್ರೋಗೆ 2023 ಬಿಡುವಿಲ್ಲದ ವರ್ಷ: ಆದಿತ್ಯ, ಚಂದ್ರಯಾನ-3 ಸೇರಿ ಹಲವು ಹೊಸ ಯೋಜನೆ

12:42 AM Jan 01, 2023 | Team Udayavani |

ಹೊಸದಿಲ್ಲಿ: 2023 ಅನ್ನು ಇಡೀ ಜಗತ್ತೇ ಸಂಭ್ರಮದಿಂದ ಸ್ವಾಗತಿಸಿದೆ. ಇದರ ನಡುವೆ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ) 2023ರಲ್ಲಿ ಸಾಲುಸಾಲು ಅಂತರಿಕ್ಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಇಡೀ ವರ್ಷವನ್ನು ಬಿಡುವಿಲ್ಲದೇ ಅದು ಕಳೆಯಲಿದೆ.

Advertisement

ಇಸ್ರೋದಿಂದ ಈ ವರ್ಷ ಕರ್ನಾಟಕಕ್ಕೂ ಒಂದು ಕೊಡುಗೆಯಿದೆ. ಚಿತ್ರದುರ್ಗದಲ್ಲಿ ಪುನರ್ಬಳಕೆ ಮಾಡಬಹುದಾದ ಉಡಾವಣೆ ವಾಹನವನ್ನು ನೆಲಕ್ಕಿಳಿಸುವ ರನ್‌ ವೇಯನ್ನು ಸಿದ್ಧ ಮಾಡಲಾಗಿದೆ. ಅದರ ಪರೀಕ್ಷೆ ಈ ವರ್ಷದ ಆರಂಭಿಕ ತಿಂಗಳಲ್ಲೇ ನಡೆಯುವ ಸಾಧ್ಯತೆಯಿದೆ. ಇದು ಚಿತ್ರದುರ್ಗ ಜಿಲ್ಲೆಗೊಂದು ವೈಜ್ಞಾನಿಕ ಆಯಾಮವನ್ನು ನೀಡಲಿದೆ.

ಇನ್ನು ಮಾನವಸಹಿತ ಅಂತರಿಕ್ಷಯಾನ ಮಾಡಲು ಇಸ್ರೋ ಗಗನಯಾನ ಯೋಜನೆ ಸಿದ್ಧಪಡಿಸಿದೆ. 2023ರ ಅಂತ್ಯಕ್ಕೆ ಮಾನವರಹಿತ ಯಾನದ ಪ್ರಯೋಗ ನಡೆಯಲಿದೆ. ಇನ್ನು ಸೂರ್ಯನನ್ನು ಅಧ್ಯಯನ ಮಾಡುವ “ಆದಿತ್ಯ’ ಎಂಬ ಉಪಗ್ರಹವನ್ನು ಮಾರ್ಚ್‌ ನಲ್ಲಿ ಹಾರಿಬಿಡಲಾಗುತ್ತದೆ. ಇನ್ನು ಚಂದ್ರನ ವ್ಯಾಪಕ ಅಧ್ಯಯನಕ್ಕೆ ಚಂದ್ರಯಾನ-3ನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಮತ್ತೂಮ್ಮೆ ವಿಕ್ರಮ್‌ ಲ್ಯಾಂಡರ್‌, ರೋವರ್‌ಗಳನ್ನು ಚಂದ್ರನ ಮೇಲಕ್ಕಿಳಿಸಲಾಗುತ್ತದೆ. ಹಿಂದೆ ಇದೇ ಉಪಗ್ರಹಗಳನ್ನು ಇಳಿಸಿದ್ದಾಗ ಸಣ್ಣ ಲೋಪವುಂಟಾಗಿತ್ತು.

ಇನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಯೋಗಗಳನ್ನು ಮಾಡಲು ಕೇಂದ್ರ ಸರಕಾರ ಖಾಸಗಿ ಕ್ಷೇತ್ರಕ್ಕೂ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಹಲವು ಸ್ಟಾರ್ಟ್‌ಅಪ್‌ಗ್ಳು ಕಾರ್ಯಾರಂಭ ಮಾಡಿವೆ. ಈಗಾಗಲೇ ಸ್ಕೈರೂಟ್‌ ಏರೋಸ್ಪೇಸ್‌ ಸಂಸ್ಥೆ ವಿಕ್ರಮ್‌ ಎಸ್‌ ಎಂಬ ಉಪಗ್ರಹವನ್ನು, ಪಿಕ್ಸೆಲ್‌ ಕಂಪೆನಿ ಶಕುಂತಲಾ ಎಂಬ ಉಪಗ್ರಹವನ್ನು ಉಡಾವಣೆ ಮಾಡಿದೆ. ಅದೇ ರೀತಿ 2023ರಲ್ಲೂ ಹಲವು ಸ್ಟಾರ್ಟ್‌ಅಪ್‌ಗ್ಳು ತಮ್ಮ ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿವೆ.

ಹೊಸ ವರ್ಷದ ಸೂರ್ಯೋದಯವು ನಮ್ಮೆಲ್ಲರ ಬದುಕಿಗೆ ಹೊಸ ಶಕ್ತಿ ತುಂಬಲಿ, ಹೊಸ ಸಂತೋಷ, ಉದ್ದೇಶ, ಪ್ರೇರಣೆ ಮತ್ತು ಶ್ರೇಷ್ಠ ಸಾಧನೆಯನ್ನು ಸಾಧ್ಯವಾಗಿಸಲಿ. ಈ ಸಂದರ್ಭದಲ್ಲಿ, ನಾವೆಲ್ಲರೂ ದೇಶದ ಏಕತೆ, ಸಮಗ್ರತೆ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿಯ ಸಂಕಲ್ಪಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳೋಣ.
– ದ್ರೌಪದಿ ಮುರ್ಮು, ರಾಷ್ಟ್ರಪತಿ

Advertisement

ಎಲ್ಲೆಲ್ಲೂ ಪ್ರವಾಸಿಗರ ದಂಡು
ಹೊಸ ವರ್ಷದ ಸಂಭ್ರಮದ ನಡುವೆ ಜನರಲ್ಲಿದ್ದ ಕೊರೊನಾ ಭೀತಿಯೇ ಮಾಯವಾಗಿಬಿಟ್ಟಿದೆ. ದೇಶಾದ್ಯಂತ ಎಲ್ಲ ಪ್ರವಾಸಿ ತಾಣಗಳು, ದೇವಸ್ಥಾನಗಳಲ್ಲಿ ಜನವೋ ಜನ. ಹೊಸ ವರ್ಷಕ್ಕೆ ಮುನ್ನಾದಿನವಾದ ಶನಿವಾರವೇ ಹಿಮಾಚಲ ಪ್ರದೇಶದ ಮನಾಲಿ, ದಿಲ್ಲಿಯ ಕರ್ತವ್ಯಪಥ ಸಹಿತ ಎಲ್ಲೆಡೆಯೂ ಜನರು ದಂಡುದಂಡಾಗಿ ಆಗಮಿಸಿದ್ದಾರೆ.

ಶಿಮ್ಲಾದಲ್ಲಂತೂ ಬುಕಿಂಗ್‌ ಮಾಡದ ಪ್ರವಾಸಿಗರಿಗೆ ನೋ ಎಂಟ್ರಿ ಎಂಬ ಫ‌ಲಕಗಳನ್ನು ಹಾಕಲಾಗಿದೆ. ಗೋವಾದಲ್ಲಿ ಕ್ರಿಸ್‌ಮಸ್‌ ದಿನದಿಂದಲೇ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ದೇಶ-ವಿದೇಶಗಳ ಜನರು ಇಲ್ಲಿನ ಬೀಚ್‌ಗಳು, ರೆಸಾರ್ಟ್‌ಗಳಲ್ಲಿ ತುಂಬಿದ್ದಾರೆ. ಎಲ್ಲ ಹೊಟೇಲ್‌ಗ‌ಳ ರೂಂಗಳೂ ಬುಕ್‌ ಆಗಿವೆ. ಕೋಲ್ಕತಾ, ಮುಂಬಯಿ ಸಹಿತ ಹಲವೆಡೆ ಶನಿವಾರ ಇಡೀ ದಿನ ಟ್ರಾಫಿಕ್‌ ಜಾಮ್‌ ಆಗಿತ್ತು. ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲಕ್ಕೆ ರವಿವಾರ 5 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next