ಹೊಸದಿಲ್ಲಿ: ಕಡಿಮೆ ತೂಕದ ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡುವುದಕ್ಕಾಗಿ ಸಣ್ಣ ಉಡಾಹಕಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಇಸ್ರೋ ಮುಖ್ಯಸ್ಥ ಕೆ. ಶಿವನ್ ಹೇಳಿದ್ದಾರೆ. ಬೆಂಗಳೂರಿನ ಸ್ಪೇಸ್ ಎಕ್ಸ್‌ಪೋ 2018ರಲ್ಲಿ ಮಾತನಾಡಿದ ಅವರು, 500 ರಿಂದ 700 ಕಿಲೋ ತೂಕದ ಸಣ್ಣ ಸ್ಯಾಟಲೈಟ್‌ಗಳನ್ನು ಭೂಮಿಯಿಂದ 500 ಕಿ.ಮೀ ದೂರದವರೆಗೆ ಕಳುಹಿಸಲು ಸಣ್ಣ ಉಡಾಹಕಗಳ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಸ್ಟಾರ್ಟಪ್‌ಗ್ಳಿಗೆ ಬೆಂಬಲ ನೀಡುವ ಉದ್ದೇಶದಿಂದ ಆರು ಸ್ಥಳಗಳಲ್ಲಿ ಇನ್‌ಕುಬೇಶನ್ ಸೆಂಟರ್‌ಗಳನ್ನೂ ಇಸ್ರೋ ಸ್ಥಾಪಿಸಲಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮವು ಎರಡು ಪ್ರಮುಖ ಆಧಾರ ಸ್ತಂಭಗಳಾಗಿದ್ದು, ಇಸ್ರೋದ ಹೊರೆಯನ್ನು ಕಡಿಮೆ ಮಾಡಲು ಉದ್ಯಮ ನೆರವಾಗಬೇಕಿದೆ ಎಂದಿದ್ದಾರೆ. ಸಣ್ಣ ಸ್ಯಾಟಲೈಟ್‌ಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂವಹನ ಉದ್ದೇಶಕ್ಕೆ ಸಣ್ಣ ಸ್ಯಾಟಲೈಟ್‌ಗಳನ್ನು ಬಳಸಲಾಗುತ್ತಿದೆ. ಈ ಮಾರುಕಟ್ಟೆಗೆ ಪೂರಕವಾಗಿ, ಸಣ್ಣ ಸ್ಯಾಟಲೈಟ್ ಉಡಾವಣಾ ವಾಹಕಗಳನ್ನು ಇಸ್ರೋ ಅಭಿವೃದ್ಧಿಪಡಿಸುತ್ತಿದೆ ಎಂದು ಸಿವನ್ ಹೇಳಿದ್ದಾರೆ.
ಸಾಮಾನ್ಯವಾಗಿ ಇವು ಸರಳ ತಂತ್ರಜ್ಞಾನವನ್ನು ಬಳಸುತ್ತವೆ. ಪ್ರತಿ ವರ್ಷ ಈ ರೀತಿಯ 50-60 ಉಡಾಹಕಗಳ ಅಗತ್ಯ ಇರುತ್ತವೆ. ಇಸ್ರೋ ಮುಂದಿನ 3-4 ವರ್ಷಗಳಲ್ಲಿ ಗಗನಯಾನದ ಮೇಲೆ ಹೆಚ್ಚು ಗಮನ ಹರಿಸುವುದರಿಂದ, ಖಾಸಗಿಯವರು ಈ ನಿಟ್ಟಿನಲ್ಲಿ ಹೆಚ್ಚು ಶ್ರಮಿಸಿದರೆ ಇಸ್ರೋ ಹೊರೆ ಕಡಿಮೆಯಾಗುತ್ತದೆ. ಈ ಸಣ್ಣ ಉಡಾಹಕಗಳನ್ನು ನಿರ್ಮಿಸುವಲ್ಲಿ ಸಮಯ ವ್ಯರ್ಥ ಮಾಡದೇ,ಖಾಸಗಿಯವರಿಗೆ ಇದರ ಜವಾಬ್ದಾರಿಯನ್ನು ವಹಿಸಲು ಬಯಸಿದ್ದೇವೆ.
ಗಗನಯಾನಕ್ಕೆ ಫ್ರಾನ್ಸ್ ಸಹಭಾಗಿತ್ವ: ಇಸ್ರೋದ ಮಾನವ ಸಹಿತ ಗಗನಯಾನಕ್ಕೆ ಭಾರತ ಹಾಗೂ ಫ್ರಾನ್ಸ್ ಕೈಜೋಡಿಸಿವೆ. ಈ ಬಗ್ಗೆ ಬೆಂಗಳೂರು ಸ್ಪೇಸ್ ಎಕ್ಸ್‌ಪೋದಲ್ಲಿ ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಜಿಯಾನ್ ಯೆಸ್ ಲೆ ಗಾಲ್ ಘೋಷಣೆ ಮಾಡಿದ್ದಾರೆ. ಬಾಹ್ಯಾಕಾಶದಲ್ಲಿ ಆರೋಗ್ಯ, ಗಗನಯಾನಿಗಳ ಆರೋಗ್ಯ ಮೇಲ್ವಿಚಾರಣೆ, ಲೈಫ್ ಸಪೋರ್ಟ್, ರೇಡಿಯೇಶನ್ ವಿರುದ್ಧ ರಕ್ಷಣೆ ಸೇರಿದಂತೆ ಹಲವು ವಿಷಯಗಳಲ್ಲಿ ಫ್ರಾನ್ಸ್‌ನ ಸಿಎನ್‌ಇಎಸ್ ಸಹಕಾರ ನೀಡಲಿದೆ. ಉಭಯ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಮಂಗಳ, ಶುಕ್ರ ಹಾಗೂ ಕ್ಷುದ್ರಕಾಯಗಳ ಅಧ್ಯಯನದಲ್ಲೂ ಒಟ್ಟಾಗಿ ಕಾರ್ಯನಿರ್ವಹಿಸುವ ಆಸಕ್ತಿ ಹೊಂದಿವೆ.