ಬೆಂಗಳೂರು: ಬಾಹ್ಯಾಕಾಶಕ್ಕೆ ಏಕಕಾಲದಲ್ಲಿ 104 ಉಪಗ್ರಹಗಳ ಯಶಸ್ವಿ ಉಡಾವಣೆ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ)ಯ ಸಾಧನೆಗೆ ದೇಶ-ವಿದೇಶಗಳಿಂದ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದ್ದರೆ, ಅತ್ತ ಇಸ್ರೋ ಮಾತ್ರ ‘ಇದೊಂದು ಸಾಮಾನ್ಯ ಉಡಾವಣಾ ಪ್ರಕ್ರಿಯೆ ಅಷ್ಟೇ’ ಎಂದು ವಿನೀತಭಾವ ತೋರುತ್ತಿದೆ.
ಇಸ್ರೊ ಸಂಸ್ಥೆ ಸಾಧಿಸಿರುವ ಈ ಮಹಾನ್ ಸಾಧನೆಗೆ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ ಸೇರಿ ವಿಶ್ವಕ್ಕೆ ವಿಶ್ವವೇ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಹುಬ್ಬೇರಿಸಿ ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಜನಸಾಮಾನ್ಯರ ತನಕ ಎಲ್ಲರೂ ಇಸ್ರೋ ವಿಜ್ಞಾನಿಗಳ ಈ ಐತಿಹಾಸಿಕ ಸಾಧನೆಗೆ ಶಹಬಾಸ್‌ಗಿರಿ ಹೇಳುತ್ತಿದ್ದಾರೆ. ಆದರೆ, ಇಸ್ರೋ ವಿಜ್ಞಾನಿಗಳು ಮಾತ್ರ ಹೆಗ್ಗಳಿಕೆ ಬಯಸುತ್ತಿಲ್ಲ.
ಈ ಹಿನ್ನೆಲೆಯಲ್ಲಿ “ಉದಯವಾಣಿ’ಜತೆ ಮಾತನಾಡಿದ ಇಸ್ರೋ ಅಧಿಕಾರಿಗಳು, “ನಮ್ಮಲ್ಲಿ ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಉಪಗ್ರಹಗಳನ್ನು ಉಡಾವಣೆ ಮಾಡುವುದು ಮಾಮೂಲು. ಅದರಂತೆ, ನಮ್ಮ ದೇಶದ ಎರಡು ನ್ಯಾನೊ ಉಪಗ್ರಹಗಳ ಉಡಾವಣೆಗೆ ಮೊದಲು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿತ್ತು. ಅಷ್ಟೊತ್ತಿಗೆ ಅಮೆರಿಕ ಸೇರಿ ಕೆಲವೊಂದು ದೇಶಗಳು, ತಮ್ಮ ಉಪಗ್ರಹವನ್ನು ಕೂಡ ಪಿಎಸ್‌ಎಲ್‌ವಿ-ಸಿ36 ರಾಕೆಟ್ ಮುೂಲಕ ಉಡಾವಣೆ ಮಾಡುವಂತೆ ಕೋರಿತ್ತು.
ಆ ಪ್ರಕಾರ, ನಮ್ಮ ಲಾಂಚ್ ವೆಹಿಕಲ್‌ನ ಸಾಮರ್ಥ್ಯ ನೋಡಿಕೊಂಡು ಒಂದೊಂದು ಉಪಗ್ರಹವನ್ನು ಅದಕ್ಕೆ ಜೋಡಣೆ ಮಾಡುತ್ತ ಹೋದೆವು. ಕೊನೆಗೆ ಒಟ್ಟು 83 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸುವುದಕ್ಕೆ ತೀರ್ಮಾನಿಸಲಾಗಿತ್ತು. ವಿಶೇಷ ಅಂದರೆ, ಎಲ್ಲ ಪೂರ್ವ ತಯಾರಿ ಪೂರ್ಣಗೊಂಡಾಗ ಪಿಎಸ್‌ಎಲ್‌ವಿ-ಸಿ36 ರಾಕೆಟ್ ಉಡಾವಣೆಗೆ ಒಟ್ಟು 104 ಉಪಗ್ರಹಗಳು ಸಿದ್ಧವಾಗಿತ್ತು.. ಪಿಎಸ್‌ಎಲ್‌ವಿ-ಸಿ36 ಗೆ ಅಷ್ಟೊಂದು ಉಪಗ್ರಹಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಕೂಡ ಇದ್ದ ಕಾರಣ, ನಮ್ಮ ಉಡಾವಣೆ ನಿರೀಕ್ಷೆಯಂತೆ ಯಶಸ್ವಿಯಾಯಿತು’ ಎನ್ನುತ್ತಾರೆ ಇಸ್ರೋದ ಸಾರ್ವಜನಿಕ ಸಂಪರ್ಕ ವಿಭಾಗ ನಿರ್ದೇಶಕ ದೇವಿಪ್ರಸಾದ್ ಕಾರ್ಣಿಕ್.