ಶ್ರೀಹರಿಕೋಟ:ಎಲ್‌ವಿಎಂ3-ಎಂ3 ರಾಕೆಟ್ ಮೂಲಕ ಬ್ರಿಟನ್ ಮೂಲದ ಒನ್‌ವೆಬ್ ಕಂಪನಿಯ 36 ಉಪಗ್ರಹಗಳ ಉಡಾವಣೆಗೆ ಇಸ್ರೋ ಸಜ್ಜಾಗಿದ್ದು, ಶನಿವಾರವೇ ಕೌಂಟ್‌ಡೌನ್ ಆರಂಭವಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಬೆಳಗ್ಗೆ 9 ಗಂಟೆಗೆ 36 ಉಹಗ್ರಹಗಳನ್ನು ಹೊತ್ತ 43.5 ಮೀಟರ್ ಎತ್ತರದ ರಾಕೆಟ್ ನಭಕ್ಕೆ ಚಿಮ್ಮಲಿದೆ. ಎಲ್‌ವಿಎಂ3 ರಾಕೆಟ್‌ನ 6ನೇ ಉಡಾವಣೆ ಇದಾಗಿದೆ.
ಇಸ್ರೋದ ವಾಣಿಜ್ಯಿಕ ಅಂಗ ನ್ಯೂಸ್ಪೇಸ್ ಇಂಡಿಯಾ ಲಿ.ನೊಂದಿಗೆ ಈ ಹಿಂದೆಯೇ ಬ್ರಿಟನ್‌ನ ಒನ್‌ವೆಬ್ ಕಂಪನಿಯು ಭೂಮಿಯ ಕೆಳಕಕ್ಷೆಯ ಒಟ್ಟು 72 ಉಪಗ್ರಹಗಳ ಉಡಾವಣೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ, ಮೊದಲ 36 ಉಪಗ್ರಹಗಳನ್ನು 2022ರ ಅಕ್ಟೋಬರ್ 23ರಂದು ಉಡಾವಣೆ ಮಾಡಲಾಗಿತ್ತು. ಈಗ ಉಳಿದ 36 ಉಪಗ್ರಹಗಳ ಉಡಾವಣೆ ಪೂರ್ಣಗೊಳ್ಳಲಿದೆ.
ಒನ್‌ವೆಬ್ ಕಂಪನಿಯು ಈಗಾಗಲೇ ಕಕ್ಷೆಯಲ್ಲಿ 582 ಉಪಗ್ರಹಗಳನ್ನು ಹೊಂದಿದ್ದು, ಭಾನುವಾರದ ಉಡಾವಣೆಯಿಂದ ಇವುಗಳ ಸಂಖ್ಯೆ 618ಕ್ಕೆ ಏರಿಕೆಯಾಗಲಿದೆ. ಭೂಮಿಯ ಕೆಳ ಕಕ್ಷೆಯ ಉಪಗ್ರಹಗಳ ಪುಂಜವನ್ನು ರೂಪಿಸಿ, ಜಗತ್ತಿನ ಮೂಲೆ ಮೂಲೆಗೂ ಅಂತರ್ಜಾಲ ಸೇವೆಯನ್ನು ಒದಗಿಸುವುದು ಒನ್‌ವೆಬ್‌ನ ಉದ್ದೇಶವಾಗಿದೆ.
ರಾಕೆಟ್‌ನ ಎತ್ತರ- 43.5 ಮೀಟರ್
ಎಷ್ಟು ಉಪಗ್ರಹಗಳ ಉಡಾವಣೆ? – 36
ಈ ಉಪಗ್ರಹಗಳ ಒಟ್ಟು ತೂಕ – 5,805 ಕೆ.ಜಿ.
ಈಗಾಗಲೇ ಕಕ್ಷೆಯಲ್ಲಿರುವ ಒನ್‌ವೆಬ್‌ನ ಉಪಗ್ರಹಗಳು- 582