Advertisement

ಇಸ್ರೋ ಸಾಧನೆ: ಚಂದ್ರಯಾನಕ್ಕೆ ವಾಹನ ರೆಡಿ

03:45 AM Jun 06, 2017 | Team Udayavani |

ಶ್ರೀಹರಿಕೋಟ: ದೇಶಿ ನಿರ್ಮಿತ ಜಿಎಸ್‌ಎಲ್‌ವಿ ಮಾರ್ಕ್‌-3 ಡಿ1 ರಾಕೆಟ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ ಭಾರತ, ಮಂಗಳ ಮತ್ತು ಚಂದ್ರನ ಅಂಗಳಕ್ಕೆ ಮಾನವನನ್ನು ಕಳುಹಿಸಿಕೊಡುವ, ಮುಂದಿನ ತಲೆಮಾರಿನ ಉಪಗ್ರಹ ಉಡಾವಣೆಯನ್ನು ತನ್ನದೇ ನೆಲದಿಂದ ಮಾಡಲು ದಾರಿ ಸುಗಮ ಮಾಡಿಕೊಂಡಿದೆ.

Advertisement

ಸೋಮವಾರ ಆಂಧ್ರಪ್ರದೇಶದ ಸತೀಶ್‌ ಧವನ್‌ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ನಿಗದಿತ ಸಮಯ ಸಂಜೆ 5.28ಕ್ಕೆ ಉಪಗ್ರಹವನ್ನು ನಭಕ್ಕೆ ಚಿಮ್ಮಿಸಲಾಯಿತು.

ಇದರೊಂದಿಗೆ ಚಂದಿರನಲ್ಲಿಗೆ ಮಾನವ ಸಹಿತ ಪಯಣ ಬೆಳೆಸುವ ಭಾರತದ ದೊಡ್ಡ ಕನಸು ಚಂದ್ರಯಾನ-2 ಯೋಜನೆ ಮತ್ತೂಂದು ಮಜಲು ಮುಟ್ಟಿದೆ. ಈ ಯೋಜನೆಗೆ ಅಗತ್ಯ ಬೀಳುವ 12,500 ಕೋಟಿ ರೂ. ಬೇಡಿಕೆಯನ್ನು ಈಗಾಗಲೇ ಇಸ್ರೋ ಕೇಂದ್ರ ಸರಕಾರದ ಮುಂದಿ ಟ್ಟಿದ್ದು, ಅದು ಅನುಮೋದನೆಗೊಂಡಲ್ಲಿ ಏಳು ವರ್ಷಗಳಲ್ಲಿ ಭಾರತದ ಕನಸು ನನಸಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಇದಕ್ಕಾಗಿ 2000ದಲ್ಲಿಯೇ ರಾಕೆಟ್‌ ಅಭಿವೃದ್ಧಿ ಕಾರ್ಯ ಆರಂಭಗೊಂಡಿತ್ತಾದರೂ, ಅಮೆರಿಕ ಭಾರತದ ಮೇಲೆ ಹೇರಿದ್ದ ದಿಗ್ಬಂಧನ ದಿಂದಾಗಿ ಉಡ್ಡಯನ ಕೈಗೂಡಲು ಇಷ್ಟು ವರ್ಷ ಕಾಯ ಬೇಕಾಯಿತು. 300 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ 4,000 ಕೆ.ಜಿ. ಭಾರ ಹೊತ್ತೂ ಯ್ಯಬಲ್ಲ 43.43 ಮೀ. ಎತ್ತರ, 640 ಟನ್‌ ಭಾರದ ರಾಕೆಟ್‌ ಸೋಮವಾರ ಸಂಜೆ 3,136 ಕೆ.ಜಿ. ತೂಕದ ಸಂವಹನ ಉಪಗ್ರಹ ಜಿಸ್ಯಾಟ್‌-19 ಹೊತ್ತು ಬಾಹ್ಯಾಕಾಶಕ್ಕೆ ಸಾಗಿದಾಗ ವಿಜ್ಞಾನಿಗಳ ಸಂಭ್ರಮವೂ ಆಕಾಶ ಮುಟ್ಟಿತ್ತು. ಮಾರ್ಕ್‌-3 ರಾಕೆಟ್‌ 16 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಯ ಪಥ ಸೇರಿಸಿತು ಎಂದು ಇಸ್ರೋ ತಿಳಿಸಿದೆ. 

ಇದೊಂದು ಐತಿಹಾಸಿಕ ದಿನ. ಜಿಎಸ್‌ಎಲ್‌ವಿ ಮಾರ್ಕ್‌-3 ಡಿ1 ರಾಕೆಟ್‌ ಉಡಾವಣೆ ಮಾಡುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ. ಮೊದಲ ಪ್ರಯತ್ನದಲ್ಲೇ ಯಶಸ್ವಿ ಯಾಗಿರುವುದು ದೊಡ್ಡ ಸಾಧನೆ.
– ಎ.ಎಸ್‌. ಕಿರಣ್‌ ಕುಮಾರ್‌, ಇಸ್ರೋ ಅಧ್ಯಕ್ಷ

Advertisement

ಇಸ್ರೋ ಸಾಧನೆ ದೇಶವೇ ಹೆಮ್ಮೆ ಪಡುವಂಥದ್ದು. ಇಸ್ರೋ ತಂಡ ಇನ್ನಷ್ಟು ಸಾಧನೆ ಮಾಡುವ ವಿಶ್ವಾಸ ವಿದೆ. ಇದಕ್ಕೆ ಕಾರಣರಾಗಿರುವ ವಿಜ್ಞಾನಿಗಳು, ಎಂಜಿನಿಯರ್‌ಗಳು, ತಂತ್ರಜ್ಞರಿಗೆ ಅಭಿನಂದನೆ.
– ಪ್ರಣವ್‌ ಮುಖರ್ಜಿ,  ರಾಷ್ಟ್ರಪತಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದ ಯಶಸ್ಸು ವಿಶ್ವವೇ ಭಾರತದತ್ತ ಮುಖಮಾಡುವಂತೆ ಮಾಡಿದೆ. ಭಾರತ ಹೆಮ್ಮೆ ಪಡುವಂತೆ ಮಾಡಿದ, ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ.
– ನರೇಂದ್ರ ಮೋದಿ, ಪ್ರಧಾನಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next