ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆಯೊಂದು ಸಂಭವಿಸಿದೆ.
“ಅಗ್ನಿಕುಲ ಕಾಸ್ಮಾಸ್’ ಎಂಬ ಚೆನ್ನೈ ಮೂಲದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್‌ಗೆ ರಾಕೆಟ್ ವ್ಯವಸ್ಥೆಯೊಂದನ್ನು ಇಸ್ರೋ ಪೂರೈಸಿದೆ.
ಫ್ಲೈಟ್ ಟರ್ಮಿನೇಷನ್ ಸಿಸ್ಟಮ್ ಅಥವಾ ರಾಕೆಟ್‌ಗಳು ದಾರಿ ತಪ್ಪಿದಾಗ ಅವನ್ನು ನಾಶಪಡಿಸುವ ವ್ಯವಸ್ಥೆಯನ್ನು ನ.7ರಂದು “ಅಗ್ನಿಕುಲ’ಕ್ಕೆ ನೀಡಲಾಗಿದೆ. ಇದಕ್ಕೆ ಇನ್-ಸ್ಪೇಸ್ (ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಶನ್ ಆ್ಯಂಡ್ ಆಥರೈಸೇಶನ್ ಸೆಂಟರ್) ಸಂಸ್ಥೆಯ ಅಧಿಕೃತ ಸಮ್ಮತಿಯೂ ಬಿದ್ದಿದೆ.
ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಯಲ್ಲಿ ಈ ಬೆಳವಣಿಗೆ ನಡೆದಿದೆ.ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆ, ಪ್ರಯೋಗ ಮಾಡಲು ಖಾಸಗಿ ಸಂಸ್ಥೆಗಳಿಗೂ ಕೇಂದ್ರ ಸರ್ಕಾರ ಅವಕಾಶವನ್ನು ತೆರೆದಿದೆ. ಅದರ ಅಂಗವಾಗಿಯೇ ಅಗ್ನಿಕುಲ ಕಾಸ್ಮಾಸ್ ಎಂಬ ಸ್ಟಾರ್ಟಪ್ ಈ ಪ್ರಯೋಗ ಮಾಡಿದೆ. ಅಗ್ನಿಕುಲ “ಅಗ್ನಿಬಾಣ’ ಎಂಬ ಉಪಗ್ರಹ ಉಡಾವಣಾ ವಾಹನ (ರಾಕೆಟ್)ವನ್ನು ಸಿದ್ಧಪಡಿಸಿದೆ. ಇದು 2 ಹಂತದ, ಹೇಗೆ ಬೇಕಾದರೂ ಪರಿವರ್ತಿಸಬಹುದಾದ ರಾಕೆಟ್.
ಇದರಲ್ಲಿ ಇಸ್ರೋದ ರಾಕೆಟ್ ತಂತ್ರಜ್ಞಾನ ಮತ್ತು ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಈ ಬೆಳವಣಿಗೆ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿಯವರೂ ಧುಮಕಲು ಪ್ರೋತ್ಸಾಹ ನೀಡಿದಂತಾಗಿದೆ.