ಶ್ರೀಹರಿಕೋಟಾ: ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಸಾಧನೆ ಮಾಡಿತ್ತು.
ಇದೀಗ ಸಿಂಗಾಪುರದ ಡಿಎಸ್-ಎಸ್‌ಎಆರ್ ಹಾಗೂ ಇನ್ನಿತರ 6 ಉಪಗ್ರಹಗಳನ್ನು ಹೊತ್ತು ಪಿಎಸ್‌ಎಲ್‌ವಿಸಿ-56 ರಾಕೆಟ್ ಇಂದು (ಜು.30) ಬೆಳಿಗ್ಗೆ 6.30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ರಾಕೆಟ್ ಹೊತ್ತೊಯ್ಯುತ್ತಿರುವ ಉಪಗ್ರಹಗಳ ಪೈಕಿ ಡಿಎಸ್-ಎಸ್‌ಎಆರ್ ಅನ್ನು ಭೂವೀಕ್ಷಣೆ ಉಪಗ್ರಹವಾಗಿ ಅಭಿವೃದ್ಧಿ ಪಡಿಸಲಾಗಿದೆ. ಉಳಿದಂತೆ ವೆಲಾಕ್ಸ್-ಎಎಂ, ಆರ್ಕೇಡ್, ಸ್ಕೂಬ್-2, ನುಲನ್, ಗೆಲೇಸಿಯಾ ಮತ್ತು ಓಆರ್‌ಬಿ-12 ಸ್ಪೈಡರ್ ಎನ್ನುವ ಉಪಗ್ರಹಗಳನ್ನು ಸಿದ್ಧಪಡಿಸಲಾಗಿದೆ.
ಇದು ಇಸ್ರೋದ 56ನೇ ಕಾರ್ಯಾಚರಣೆಯಾಗಿದ್ದು, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸದ್ಯ ಉಡಾವಣೆ ಮಾಡಲಾಗಿರುವ ರಾಕೆಟ್ನ ಮೇಲಿನ ಹಂತವನ್ನು ಕಡಿಮೆ ಕಕ್ಷೆಯಲ್ಲಿ ಇರಿಸಿ, ಅದರಲ್ಲಿರುವ ಉಪಗ್ರಹಗಳನ್ನು ಸ್ಥಾಪಿಸಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ಪಿಎಸ್‌ಎಲ್‌ವಿಸಿ-56 ರಾಕೆಟ್ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಪ್ಯಾಡ್ ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.