ಬೆಂಗಳೂರು: ಇತ್ತೀಚೆಗಷ್ಟೇ ನಭಕ್ಕೆ ನೆಗೆದಿದ್ದ ಭಾರತದ ಚಂದ್ರಯಾನ 2 ಗಗನ ನೌಕೆಯಲ್ಲಿದ್ದ ವಿಕ್ರಂ ಲ್ಯಾಂಡರ್ ತನ್ನ ಪಥ ಮದ್ಯದಲ್ಲಿ ಸೆರೆ ಹಿಡಿದು ಕಳುಹಿಸಿರುವ ಭೂಮಿಯ ಚಿತ್ರಗಳನ್ನು ಇಸ್ರೋ ಇವತ್ತು ಬಿಡುಗಡೆಗೊಳಿಸಿದೆ.
ವಿಕ್ರಂ ಲ್ಯಾಂಡರ್ ತನ್ನಲ್ಲಿರುವ ಎಲ್-14 ಕೆಮರಾದಿಂದ ಭೂಮಿಯ ಮೆಲ್ಭಾಗದ ಈ ಅತ್ಯಾಕರ್ಷಕ ಚಿತ್ರಗಳನ್ನು ಚಂದ್ರಯಾನ-2ರ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಈ ಚಿತ್ರಗಳನ್ನು ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದೆ. ಈ ಚಿತ್ರಗಳನ್ನು ಶನಿವಾರದಂದು ತೆಗಯಲಾಗಿದೆ ಎಂದು ತಿಳಿದುಬಂದಿದೆ.
ಚಂದ್ರನಲ್ಲಿಗೆ ಪಯಣ ಬೆಳೆಸಿರುವ ಈ ನೌಕೆಯನ್ನು ಎರಡು ದಿನಗಳ ಹಿಂದೆಯಷ್ಟೇ ಯಶಸ್ವಿಯಾಗಿ ಭೂಮಿಯ ನಾಲ್ಕನೇ ಪರಿಧಿಗೆ ಏರಿಸಲಾಯಿತು. ಮುಂದಿನ ಕಕ್ಷೆ ಎತ್ತರಿಸುವಿಕೆಯು ಆಗಸ್ಟ್ 6ರ ಮಂಗಳವಾರದಂದು ನಡೆಯಲಿದೆ ಎಂದು ಇಸ್ರೋ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.