Advertisement

ಇಸ್ರೋ ಕನಸಿನ ಯೋಜನೆಗಳಿಗೆ ಈ ವರ್ಷ ರೆಕ್ಕೆ?

01:03 AM Jan 04, 2021 | Team Udayavani |

2021ಕ್ಕೆ ಹೆಜ್ಜೆಯಿಟ್ಟಿದ್ದೇ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಹೆಚ್ಚು ಭಾರವನ್ನು ಹೊತ್ತು ಸಾಗಬಲ್ಲ ರಾಕೆಟ್‌, ಮರು ಬಳಕೆ ಸಾಮರ್ಥ್ಯದ ಉಪಗ್ರಹ ಉಡಾವಣ ವಾಹನ, ಅರೆ ಕ್ರಯೋಜನಿಕ್‌ ಎಂಜಿನ್‌ ಸೇರಿದಂತೆ ದಶಕದೊಳಗೆ ತಾನು ಕೈಗೊಳ್ಳಬೇಕಿರುವ ಯೋಜನೆಗಳ ರೂಪುರೇಷೆಯನ್ನು ರಚಿಸಲಾರಂಭಿಸಿದೆ. 2030ರ ವೇಳೆಗೆಂದಷ್ಟೇ ಅಲ್ಲ, 2021ರ ಬುತ್ತಿಯಲ್ಲೂ ಇಸ್ರೋದ ಹಲವು ಯೋಜನೆಗಳಿರುವುದು ವಿಶೇಷ….

Advertisement

ಚಿಕ್ಕ ಉಪಗ್ರಹ ಉಡಾವಣ ವಾಹನ
ಕಳೆದ ಎರಡು ವರ್ಷಗಳಿಂದ ಇಸ್ರೋ, ಚಿಕ್ಕ ಉಪಗ್ರಹಗಳನ್ನು ಹೊತ್ತು ಸಾಗುವುದಕ್ಕಾಗಿಯೇ ನಿರ್ದಿಷ್ಟ ಉಡಾವಣ ವಾಹನವನ್ನು (ಎಸ್ಎಸ್‌ಎಲ್‌ವಿ) ನಿರ್ಮಿಸುವ ಕಾರ್ಯದಲ್ಲಿ ತೊಡಗಿದೆ. ಈ ವರ್ಷದಿಂದ ಆರಂಭಿಕ ತಿಂಗಳುಗಳಲ್ಲೇ ಚಿಕ್ಕ ಉಪಗ್ರಹಗಳ ಉಡಾವಣ ವಾಹನ ಗಗನಕ್ಕೆ ಚಿಮ್ಮುವ ನಿರೀಕ್ಷೆಯಿದೆ.

– 2025ರ ವೇಳೆಗೆ ಚಿಕ್ಕ ಉಪಗ್ರಹ ಮಾರುಕಟ್ಟೆಯು 15 ಶತಕೋಟಿ ಡಾಲರ್‌ಗೆರುವ ನಿರೀಕ್ಷೆಯಿದೆ. ಈ ಮಾರುಕಟ್ಟೆಯಲ್ಲಿ ದೊಡ್ಡ ಸ್ಥಾನ ಪಡೆಯಲು ಹಾಗೂ ಉಡಾವಣ ಖರ್ಚನ್ನು ಗಣನೀಯವಾಗಿ ತಗ್ಗಿಸುವ ಯೋಚನೆ ಇಸ್ರೋದ ಈ ಯೋಜನೆಯ ಹಿಂದಿದೆ.

– 600 ಕೆ.ಜಿಗಿಂತ ಕಡಿಮೆ ತೂಕದ ಉಪಗ್ರಹಗಳನ್ನು ಚಿಕ್ಕ ಉಪಗ್ರಹಗಳೆಂದು ಕರೆಯಲಾಗುತ್ತದೆ. 2019ರಲ್ಲಿ ಜಗತ್ತಿನಾದ್ಯಂತ ಈ ರೀತಿಯ 389 ಉಪಗ್ರಹಗಳನ್ನು ನಭದಲ್ಲಿ ಬಿಡಲಾಗಿದೆ.

ಚಂದ್ರಯಾನ-3
2019ರಲ್ಲಿ ಚಂದ್ರಯಾನ 2 ಯೋಜನೆಯಲ್ಲಿ ವಿಕ್ರಂ ಲ್ಯಾಂಡರ್‌ ಚಂದ್ರನಂಗಳಕ್ಕೆ ಅಪ್ಪಳಿಸಿದ ಅನಂತರ 2020ರಲ್ಲಿ ಮತ್ತೂಮ್ಮೆ ಚಂದ್ರಯಾನಕ್ಕೆ ಇದೇ ಯೋಜನೆಯನ್ನು ನಡೆಸುತ್ತೇವೆ ಎಂದು ಇಸ್ರೋ ಹೇಳಿತ್ತು. ಆದರೆ ಕೋವಿಡ್‌ ಕಾರಣದಿಂದಾಗಿ ಯೋಜನೆಗೆ ಅಡ್ಡಿಗಳು ಎದುರಾದವು. ಈ ವರ್ಷಾಂತ್ಯಕ್ಕೆ ಅಥವಾ 2022ರ ಆರಂಭದಲ್ಲಿ ಚಂದ್ರಯಾನ-3 ಕೈಗೊಳ್ಳಲು ಇಸ್ರೋ ಸಜ್ಜಾಗಿದ್ದು, ಈ ಬಾರಿ ಕೇವಲ ಲ್ಯಾಂಡರ್‌ ಮತ್ತು ರೋವರ್‌ಗಳನ್ನಷ್ಟೇ ಕಳಿಸಲಿದೆ. ಈಗಾಗಲೇ ಕಳಿಸಲಾದ ಆರ್ಬಿಟರ್‌ ಚಂದ್ರನ ಕಕ್ಷೆಯಲ್ಲಿ ಸಕ್ಷಮವಾಗಿಯೇ ಕೆಲಸ ಮಾಡುತ್ತಿರುವುದರಿಂದ ಅದನ್ನೇ ಬಳಸಿಕೊಳ್ಳುವ ಉದ್ದೇಶ.

Advertisement

ಮರುಬಳಕೆ ಉಡಾವಣ ವಾಹನ: 2016ರಲ್ಲಿ ಇಸ್ರೋ, ಮರುಬಳಕೆ ಮಾಡಬಹುದಾದ ಉಡಾವಣ ವಾಹನ ಪ್ರದರ್ಶಕವನ್ನು ಮೊದಲು ಪರೀಕ್ಷೆ ಮಾಡಿತ್ತು. ಎರಡು ಹಂತದ ಕಕ್ಷೀಯ ಉಡಾವಣ ವಾಹನವಾಗಿ ಈ ಪ್ರಯೋಗವು ವಿಕಸನಗೊಳ್ಳಬೇಕೆಂಬ ಗುರಿ ಇಸ್ರೋಗಿದೆ. ಈ ವರ್ಷದ ಪ್ರಯೋಗದಲ್ಲಿ ಈ ಉಡಾವಣ ವಾಹನವು ಸ್ವಯಂ ಚಾಲಿತವಾಗಿ ಕೆಳಕ್ಕೆ ಬಂದಿಳಿಯುವ ಪ್ರಯೋಗ ನಡೆಯಲಿದ್ದು, ಭಾರತೀಯ ವಾಯುಪಡೆಯು ಹೆಲಿಕಾಪ್ಟರ್‌ ಮೂಲಕ ಈ ಇದನ್ನು 4 ಕಿಲೋಮೀಟರ್‌ ಎತ್ತರಕ್ಕೊಯ್ದು ಕೆಳಕ್ಕೆ ಬಿಡಲಾಗುತ್ತದೆ. ಆಗ ಅದರಲ್ಲಿನ ಟೆಕ್ನಾಲಜಿ ಡೆಮಾನ್ಸ್‌ ಟ್ರೇಟರ್‌ ವಾಹನವನ್ನು ಸ್ವಯಂಚಾಲಿತವಾಗಿ ನಿಯಂತ್ರಣಕ್ಕೆ ತೆಗೆದುಕೊಂಡು ನಮ್ಮದೇ ಚಿತ್ರದುರ್ಗ ಜಿಲ್ಲೆಯ ಮಿಲಿಟರಿ ಪ್ರದೇಶದಲ್ಲಿ ಇಳಿಸಲಿದೆ. ಈ ವರ್ಷದ ಮಧ್ಯ ಭಾಗದಲ್ಲಿ ಈ ಪ್ರಯೋಗ ನಡೆಯುವ ಸಾಧ್ಯತೆಯಿದೆ.

ಗಗನಯಾನ: ಇಸ್ರೋದ ಮಾನವಸಹಿತ ಗಗನಯಾನ ಯೋಜನೆಗೆ ಸಂಬಂಧಿಸಿ ಎರಡು ಪ್ರಯೋಗಾರ್ಥ ಉಡಾವಣೆಗಳು (ಮಾನವ ರಹಿತ) ಹಾಗೂ ಇನ್ನಿತರ ಹಲವು ಪ್ರಯೋಗಗಳು ಈ ವರ್ಷ ವೇಗ ಪಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next