Advertisement

ISROದಿಂದ ಪ್ರಾಣ, ವಾಯು, ಸ್ವಸ್ಥ : 3 ವೆಂಟಿಲೇಟರ್‌ ಅಭಿವೃದ್ಧಿ

12:59 AM Jun 08, 2021 | Team Udayavani |

ಹೊಸದಿಲ್ಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಮೂರು ವಿಧದ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಿದೆ. ಅಷ್ಟೇ ಅಲ್ಲ, ಅವುಗಳ ತ್ವರಿತ ಬಳಕೆಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ವರ್ಗಾಯಿಸಲೂ ಸಿದ್ಧ ಎಂದು ಹೇಳಿದೆ.

Advertisement

ಕಡಿಮೆ ದರದ, ಪುಟ್ಟ ವೆಂಟಿಲೇಟರ್‌ “ಪ್ರಾಣ’ (ಪ್ರೋಗ್ರಾಮೇಬಲ್‌ ರೆಸ್ಪಿರೇಟರಿ ಅಸಿಸ್ಟೆನ್ಸ್‌ ಫಾರ್‌ ದಿ ನೀಡೀ ಏಡ್‌), ಐಸಿಯು ದರ್ಜೆಯ ಪಾಸಿಟಿವ್‌ ಪ್ರಶರ್‌ ಮೆಕ್ಯಾನಿಕಲ್‌ ವೆಂಟಿಲೇಟರ್‌ “ವಾಯು’ (ವೆಂಟಿ ಲೇಶನ್‌ ಅಸಿಸ್ಟ್‌ ಯುನಿಟ್‌) ಮತ್ತು ಅನಿಲಶಕ್ತಿ ಆಧಾರಿತ ವೆಂಟಿಲೇಟರ್‌ “ಸ್ವಸ್ಥ’ (ಸ್ಪೇಸ್‌ ವೆಂಟಿಲೇಟರ್‌ ಏಡೆಡ್‌ ಸಿಸ್ಟಂ ಫಾರ್‌ ಟ್ರಾಮಾ ಅಸಿಸ್ಟೆನ್ಸ್‌)ವನ್ನು ಇಸ್ರೋ ಅಭಿವೃದ್ಧಿ ಪಡಿಸಿದೆ.

ಈ ಮೂರೂ ವೆಂಟಿಲೇಟರ್‌ಗಳ ಮೂಲ ವಿನ್ಯಾಸ ಸರಳವಾಗಿದ್ದು, ಈಗಿನ ಸ್ಥಿತಿಯಲ್ಲಿ ಇವುಗಳ ಬಿಡಿಭಾಗಗಳನ್ನು ಸಾಮೂಹಿಕವಾಗಿ ಉತ್ಪಾದಿಸಲು ಸಾಧ್ಯ. ಇವುಗಳ ಮಾದರಿಯನ್ನು ತಿರುವನಂತಪುರ ಮೂಲದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ತಯಾರಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಅನ್‌ಲಾಕ್‌ ಬಳಿಕ ಗಗನಯಾನ
ಇಸ್ರೋದ ಮಹತ್ವಾಕಾಂಕ್ಷಿ ಮಾನವರಹಿತ ಗಗನಯಾನಕ್ಕೆ ಕೊರೊನಾದಿಂದ ಅಡ್ಡಿಯಾಗುತ್ತಲೇ ಇದೆ. ಸರಕಾರವು ಬೆಂಗಳೂರಿನಲ್ಲಿ ಲಾಕ್‌ಡೌನ್‌ ತೆರವು ಗೊಳಿಸಿದ ಕೂಡಲೇ ಗಗನಯಾನ ಯೋಜನೆ ಕುರಿತು ಚರ್ಚಿಸಿ, ಡಿಸೆಂಬರ್‌ ವೇಳೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಸ್ರೋ ಹೇಳಿದೆ. ಮಾನವರಹಿತ ಮೊಡ್ನೂಲ್‌ ಉಡಾವಣೆಯ ಜತೆಗೆ ಡೇಟಾ ರಿಲೇ ಉಪಗ್ರಹವೊಂದನ್ನೂ ಇಸ್ರೋ ಉಡಾಯಿಸಲಿದೆ. ಈ ಉಪಗ್ರಹವು ಗಗನಯಾನದೊಂದಿಗೆ ಸಂಪರ್ಕ ಹೊಂದಲು ನೆರವಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next