ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರವಿವಾರ ಎಲ್ ವಿಎಂ3-ಎಂ3/ ಒನ್ ವೆಬ್ ಇಂಡಿಯಾ-2 ಮಿಷನ್ ಬಳಸಿ 36 ಉಪಗ್ರಹಗಳನ್ನು ಉಡಾವಣೆ ಮಾಡಿದೆ.
ಆಂಧ್ರ ಪ್ರದೇಶದ ಸತೀಶ್ ಧವನ್ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9 ಗಂಟೆಗೆ ಉಡಾವಣೆ ನಡೆಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ, LVM3 ಒಟ್ಟು 5,805 ಕೆಜಿ ತೂಕದ 36 OneWeb Gen-1 ಉಪಗ್ರಹಗಳನ್ನು 87.4 ಡಿಗ್ರಿಗಳ ಇಳಿಜಾರಿನೊಂದಿಗೆ 450 ಕಿಮೀ ವೃತ್ತಾಕಾರದ ಕಕ್ಷೆಯಲ್ಲಿ ಇರಿಸುತ್ತದೆ. ಇದು LVM3 ನ ಆರನೇ ಹಾರಾಟವಾಗಿದೆ. LVM3 ಚಂದ್ರಯಾನ ಸೇರಿದಂತೆ ಐದು ಸತತ ಯಶಸ್ವಿ ಕಾರ್ಯಾಚರಣೆಗಳನ್ನು ಹೊಂದಿತ್ತು ಎಂದು ಇಸ್ರೋ ಹೇಳಿದೆ.
36 ಉಪಗ್ರಹಗಳ ಮೊದಲ ಸೆಟ್ ಅನ್ನು LVM3-M2/OneWeb India-1 ಮಿಷನ್ ನಲ್ಲಿ ಅಕ್ಟೋಬರ್ 23, 2022 ರಂದು ಉಡಾವಣೆ ಮಾಡಲಾಗಿತ್ತು.
“ಲಡಾಕ್ ನಿಂದ ಕನ್ಯಾಕುಮಾರಿ ಮತ್ತು ಗುಜರಾತ್ ನಿಂದ ಅರುಣಾಚಲ ಪ್ರದೇಶದವರೆಗೆ, ಒನ್ ವೆಬ್ ಉದ್ಯಮಗಳಿಗೆ ಮಾತ್ರವಲ್ಲದೆ ದೇಶಾದ್ಯಂತ ತಲುಪಲು ಕಷ್ಟಕರವಾದ ಪ್ರದೇಶಗಳು ಸೇರಿದಂತೆ ಪಟ್ಟಣಗಳು, ಗ್ರಾಮಗಳು, ಪುರಸಭೆಗಳು ಮತ್ತು ಶಾಲೆಗಳಿಗೆ ಸುರಕ್ಷಿತ ಪರಿಹಾರಗಳನ್ನು ತರುತ್ತದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.