Advertisement

ಉಪಗ್ರಹ ನೆರವಿಗೂ ಇಸ್ರೋ ಮಾಹಿತಿ

12:21 PM Jun 18, 2017 | |

ಮೈಸೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವುದೇ ದೇಶ ಮಾಡದ ಮಹತ್ತರದ ಸಾಧನೆಗಳನ್ನು ಮಾಡಿದೆ. ಸಂಶೋಧನೆ ಮಾತ್ರವಲ್ಲದೆ ಉಪಗ್ರಹಗಳ ನೆರವಿಗೂ ಅಗತ್ಯ ಮಾಹಿತಿ ಒದಗಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್‌.ಕಿರಣ್‌ಕುಮಾರ್‌ ಹೇಳಿದರು.

Advertisement

ನಗರದ ಮರಿಮಲ್ಲಪ್ಪ ಕಾಲೇಜಿನ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗುರಿಕಾರ ಮರಮಲ್ಲಪ್ಪನವರ ಸಂಸ್ಮರಣೋತ್ಸವ ಹಾಗೂ ಪದವಿ ಪೂರ್ವ ಪ್ರಶಸ್ತಿ ಮತ್ತು ಸ್ವರ್ಣ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ವಿಜ್ಞಾನಿ ವಿಕ್ರಂ ಅಂಬಾಲಾಲ್‌ ಸಾರಾಬಾಯಿ ಮಾರ್ಗದರ್ಶನದಲ್ಲಿ 1963ರಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಬಾಹ್ಯಾಕಾಶ ಸಂಶೋಧನೆಗಳಿಗೆ ಮಾತ್ರವಲ್ಲದೆ, ಉಪಗ್ರಹಗಳ ನೆರವಿನಿಂದ ಮಾಹಿತಿ ತಂತ್ರಜ್ಞಾನದ ಸೇವೆಯನ್ನು ಭಾರತ ಮತ್ತು ನೆರೆಯ ರಾಷ್ಟ್ರಗಳಿಗೂ ಒದಗಿಸುತ್ತಿದೆ.

ಅಲ್ಲದೇ, 36 ಸಾವಿರ ಅಡಿ ಎತ್ತರದಿಂದ ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದು, ಇನ್‌ಸ್ಯಾಟ್‌ 3 ಉಪಗ್ರಹಗಳ ಸೇವೆಯಿಂದ ದೇಶದ 2,400 ಹಳ್ಳಿಗಳಿಗೆ ದೂರದರ್ಶನದ ಸೇವೆಯನ್ನು ಒದಗಿಸಲು ಸಹಕಾರಿಯಾಗಿದೆ ಎಂದರು.

ಪ್ರತಿ 15 ನಿಮಿಷಕ್ಕೆ ಮಾಹಿತಿ: ಇಸ್ರೋ ಸಂಸ್ಥೆ ಉಪಗ್ರಹಗಳ ನೆರವಿನಿಂದ ವಾತಾವರಣದ ಬದಲಾವಣೆ ಹಾಗೂ ಹವಾಮಾನ ವೈಪರೀತ್ಯದ ಮಾಹಿತಿಗಳನ್ನು ಪ್ರತಿ 15 ನಿಮಿಷಗಳಿಗೆ ನೀಡುತ್ತಿದೆ. ಇನ್ನೂ ಸಂಪರ್ಕ ಸಾಧನ ಉಪಗ್ರಹಗಳು, ನೇವಿಗೇಷನ್‌ನ 7 ಸಮೂಹ ಉಪಗ್ರಹಗಳ ಸಹಾಯದಿಂದ ಭಾರತ ಮಾತ್ರವಲ್ಲದೇ, 1,500 ಕಿ.ಮೀ. ದೂರದ ನೆರೆಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆಯೂ ತಿಳಿಯಬಹುದು.

Advertisement

ಇದಲ್ಲದೆ ಸಮುದ್ರದ ಯಾವ ದಿಕ್ಕಿಗೆ ಹೋದರೆ ಮೀನು ಲಭ್ಯವಾಗಲಿದೆ ಎಂಬುದನ್ನು ಮೀನುಗಾರರಗೆ ಆಯಾ ಸ್ಥಳೀಯ ಭಾಷೆಯಲ್ಲಿಯೇ ನೇವಿಗೇಷನ್‌ ಉಪಗ್ರಹ ಮಾಹಿತಿ ನೀಡುತ್ತಿದೆ. ಜತೆಗೆ ರಾಷ್ಟ್ರದ ಪ್ರಮುಖ 11 ಬೆಳೆಗಳ ಆಗು ಹೋಗುಗಳ ಕುರಿತಂತೆ ಹಾಗೂ ಬೆಳೆ ನಷ್ಟದ ಬಗ್ಗೆಯೂ ಉಪಗ್ರಹಗಳ ಮೂಲಕ ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಟೆಲಿ ಮಿಡಿಸಿನ್‌: ಈಚೆಗೆ ದಿನಗಳಲ್ಲಿ ಹೆಚ್ಚಿನ ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಿಮೋಟ್‌ ಕ್ಲಾಸ್‌ರೂಂ ವ್ಯವಸ್ಥೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಟೆಲಿ ಮಿಡಿಸಿನ್‌ ಸೌಲಭ್ಯಗಳು ಉಪಗ್ರಹಗಳ ಸಹಾಯದಿಂದ ಯಶಸ್ವಿಯಾಗಿ ನಡೆಯುತ್ತಿವೆ. ಇತರೆ ರಾಷ್ಟ್ರಗಳು ಚಂದ್ರನ ಬಳಿಗೆ ಉಪಗ್ರಹಗಳನ್ನು ಕಳುಹಿಸಿದ್ದರೆ, ನಮ್ಮ ರಾಷ್ಟ್ರ 8 ತಿಂಗಳು ಚಂದ್ರನ ಬಳಿಯೇ ಇದ್ದು ಅಧ್ಯಯನ ನಡೆಸಿತ್ತು. ಚಂದ್ರನಲ್ಲಿ ನೀರಿನ ಅಂಶ ಇರುವುದನ್ನು ಪತ್ತೆ ಮಾಡಿ ತಿಳಿಸಿದ ಹೆಗ್ಗಳಿಕೆ ಭಾರತದ್ದು. ಮಂಗಳ ಗ್ರಹದ ಕಕ್ಷೆ ಸುತ್ತಲು ಆರು ತಿಂಗಳ ಕಾಲಾವಧಿಗಾಗಿ ಉಡಾವಣೆ ಮಾಡಿದ್ದ ಉಪಗ್ರಹ ಸಾವಿರ ದಿನ ಪೂರ್ಣಗೊಂಡರೂ ಇಂದಿಗೂ ಮಾಹಿತಿ ನೀಡುತ್ತಿದೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 243 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದಕ್ಕೂ ಮುನ್ನ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದ ಸಂಸ್ಥೆಯ ಆರು ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಮರಿಮಲ್ಲಪ್ಪ ವಿದ್ಯಾಸಂಸ್ಥೆ ಗೌರವಾಧ್ಯಕ್ಷ ಎಸ್‌.ಪರಮಶಿವಯ್ಯ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್‌, ಸಂಸ್ಥೆ ಕಾರ್ಯದರ್ಶಿ ಪ್ರೊ.ಕೆ.ಎನ್‌.ಪಂಚಾಕ್ಷರಸ್ವಾಮಿ, ಪ್ರಾಂಶುಪಾಲ ಬಿ.ಆರ್‌.ನೀಲಕಂಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next