ಚಂದ್ರಯಾನ -3ರಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಭಾರತದ ಹೆಮ್ಮೆ, ಇಸ್ರೋ ಕೇಂದ್ರ ಕಚೇರಿ ಬೆಂಗಳೂರಿಗೆ ಬಂದಿದ್ದರ ಹಿಂದೆ ರೋಚಕ ಕಥೆ ಇದೆ. ವಿಶೇಷವೆಂದರೆ, ಇದು ಬರಲು ಪ್ರಮುಖ ಕಾರಣ ಸತೀಶ್ ಧವನ್! ಇವರ ಪಟ್ಟಿನಿಂದಾಗಿಯೇ ಇಸ್ರೋ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.
1962ರಲ್ಲಿ ವಿಕ್ರಮ್ ಸಾರಾಭಾಯಿ ಅವರು, ಭಾರತಕ್ಕೂ ಒಂದು ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇರಬೇಕು ಎಂಬ ಪ್ರಸ್ತಾಪ ಮುಂದಿಟ್ಟು, ಆಗಿನಿಂದಲೇ ಪ್ರಯತ್ನ ಆರಂಭಿಸಿದ್ದರು. ಆದರೆ, 1969ರಲ್ಲಿ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್(ಇಸ್ರೋ) ಜನ್ಮತಾಳಿತು. ಉಡಾವಣಾ ಕೇಂದ್ರ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸ್ಥಾಪನೆಯಾಯಿತು. ಇಸ್ರೋ ಪ್ರಮುಖ ಕೇಂದ್ರ ಬೆಂಗಳೂರಿಗೆ ಬಂದಿತು.
ಸತೀಶ್ ಧವನ್ ಅವರು ಹುಟ್ಟಿದ್ದು, ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ. ಆದರೆ, ಬೆಳೆದಿದ್ದು ಮಾತ್ರ ಈಗ ಪಾಕಿಸ್ತಾನದಲ್ಲಿರುವ ಲಾಹೋರ್‌ನಲ್ಲಿ. 1951ರಲ್ಲಿ ಭಾರತಕ್ಕೆ ಬಂದ ಸತೀಶ್ ಧವನ್ ಅವರು, ತಮ್ಮ ನೆಲೆಯನ್ನು ಬೆಂಗಳೂರಿಗೆ ವರ್ಗಾಯಿಸಿಕೊಂಡರು. ಇಲ್ಲಿ ಭಾರತೀಯ ವಿಜ್ಞಾನ ಮಂದಿರ(ಐಐಎಸ್ಸಿ)ದಲ್ಲಿ ಹಿರಿಯ ವಿಜ್ಞಾನ ಅಧಿಕಾರಿಯಾಗಿ ಸೇವೆ ಶುರು ಮಾಡಿದರು. ಅಷ್ಟೇ ಅಲ್ಲ, ತಮ್ಮ 42ನೇ ವಯಸ್ಸಿನಲ್ಲೇ ಐಐಎಸ್‌ಸಿಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೇ ಹುದ್ದೆಯಲ್ಲಿ 17 ವರ್ಷಗಳ ಕಾಲ ಇದ್ದರು. ಇವರು ಇರುವ ಅಷ್ಟೂ ದಿನ ಐಐಎಸ್‌ಸಿಯಲ್ಲಿ ಹೊಸ ಹೊಸ ಪ್ರಯೋಗಗಳಾದವು. ಪಾಠ ಮಾಡುವ ಸಲುವಾಗಿ ದೇಶ ವಿದೇಶಗಳಿಂದ ಖ್ಯಾತ ವಿಜ್ಞಾನಿಗಳು ಬರುತ್ತಿದ್ದರು.
ಆದರೆ, 1971ರ ಡಿ.30ರಂದು ವಿಕ್ರಮ್ ಸಾರಾಭಾಯಿ ಅವರು ತಮ್ಮ 52ನೇ ವಯಸ್ಸಿನಲ್ಲಿ ಕಾರ್ಡಿಯಾಕ್ ಅರೆಸ್ಟ್‌ನಿಂದಾಗಿ ಅಕಾಲಿಕ ಮರಣ ಹೊಂದಿದರು. ಇದು ಭಾರತಕ್ಕೆ ಆದ ದೊಡ್ಡ ಹೊಡೆತವಾಯಿತು. ಇವರ ಸಾವಿನ ನಂತರ, ಇಸ್ರೋ ಮುನ್ನಡೆಸಲು ವಿಜ್ಞಾನಿಯ ಹುಡುಕಾಟದಲ್ಲಿದ್ದಾಗ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಕಾಣಿಸಿದ್ದು ಸತೀಶ್ ಧವನ್. ಆಗ ಅವರು ಬೆಂಗಳೂರಿನ ಐಐಎಸ್‌ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಸತೀಶ್ ಧವನ್ ಅವರನ್ನು ಸಂಪರ್ಕಿಸಿದ ಇಂದಿರಾ ಗಾಂಧಿಯವರು, ಇಸ್ರೋ ಹೊಣೆ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಆಗ ಸತೀಶ್ ಧವನ್ ಎರಡು ಷರತ್ತು ಹಾಕಿದ್ದರು. ಮೊದಲನೆಯದು, ಇಸ್ರೋ ಮುಖ್ಯ ಕಚೇರಿ ಬೆಂಗಳೂರಿನಲ್ಲೇ ಆಗಬೇಕು. ಎರಡನೆಯದು, ಐಐಎಸ್‌ಸಿಯಲ್ಲಿಯೂ ತಾವು ಕೆಲಸ ಮುಂದುವರಿಸಲು ಅವಕಾಶ ನೀಡಬೇಕು. ಈ ಎರಡೂ ಷರತ್ತುಗಳಿಗೂ ಇಂದಿರಾ ಗಾಂಧಿಯವರು ಒಪ್ಪಿಗೆ ನೀಡಿದರು. ಬೆಂಗಳೂರಿಗೆ ಇಸ್ರೋ ಕೇಂದ್ರ ಕಚೇರಿ ಬೇಕು ಎಂದು ಧವನ್ ಅವರು ಕೇಳಿದ್ದರ ಹಿಂದೆ ಕಾರಣಗಳೂ ಇದ್ದವು. 1940ರಲ್ಲೇ ಬೆಂಗಳೂರಿನಲ್ಲಿ ಎಚ್‌ಎಎಲ್ ಮತ್ತು 1942ರಲ್ಲಿ ಐಐಎಸ್‌ಸಿ ಆರಂಭವಾಗಿತ್ತು. ವಿಜ್ಞಾನ ಸಂಬಂಧಿ ಕೆಲಸಗಳು ಇಲ್ಲೇ ಆಗಲಿ ಎಂಬುದು ಅವರ ಆಶಯವಾಗಿತ್ತು.