Advertisement
ಸುಮಾರು 986 ಕೋಟಿ ರೂ. ವೆಚ್ಚದಲ್ಲಿ ಇಸ್ರೋ ಕಾಂಪ್ಲೆಕ್ಸ್ ನಿರ್ಮಾಣವಾಗಲಿದ್ದು, ವರ್ಷಕ್ಕೆ 24 ಉಪಗ್ರಹಗಳನ್ನು ಇಲ್ಲಿಂದ ಉಡಾವಣೆ ಮಾಡಬಹುದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಸೋಮನಾಥ್, “ಎಸ್‌ಎಸ್‌ಎಲ್‌ವಿ ಮಾದರಿಯ ರಾಕೆಟ್‌ಗಳ ಉಡಾವಣೆಗೆ ಈ ಕೇಂದ್ರವನ್ನು ಬಳಸಲಾಗುವುದು. ಈ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ತಮಿಳುನಾಡು ಸರ್ಕಾರವು ಭೂಮಿಯನ್ನು ಇಸ್ರೋಗೆ ಹಸ್ತಾಂತರಿಸಿದೆ’ ಎಂದಿದ್ದಾರೆ.
ಇಸ್ರೋ ಕೇಂದ್ರ ಶಿಲಾನ್ಯಾಸ ಕುರಿತು ಡಿಎಂಕೆ ಸಚಿವರೊಬ್ಬರು ನೀಡಿದ ಜಾಹೀರಾತಿನಲ್ಲಿ ಪ್ರಧಾನಿ ಮೋದಿ, ಸಿಎಂ ಸ್ಟಾಲಿನ್ ಚಿತ್ರದ ಜತೆಗೆ ಚೀನಾ ಧ್ವಜವಿರುವ ರಾಕೆಟ್‌ನ ಚಿತ್ರ ಬಳಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ಮೋದಿ, “ಡಿಎಂಕೆಯವರು ಎಲ್ಲ ಮಿತಿಗಳನ್ನೂ ಮೀರಿದ್ದಾರೆ. ಇದು ನಮ್ಮ ದೇಶಕ್ಕೆ, ಬಾಹ್ಯಾಕಾಶ ವಿಜ್ಞಾನಿಗಳಿಗೆ ಮಾಡಿರುವ ಅವಮಾನ’ ಎಂದಿದ್ದಾರೆ. ಇನ್ನು, ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ಇದು ಡಿಎಂಕೆ ಚೀನಾಕ್ಕೆ ಎಷ್ಟು ನಿಷ್ಠವಾಗಿದೆ ಎಂದು ತೋರಿಸುತ್ತದೆ. ಹಾಗೆಯೇ ಭಾರತದ ಸಾರ್ವಭೌಮತೆ ಬಗ್ಗೆ ಇರುವ ಅಗೌರವವನ್ನು ತೋರಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ. ಇದೇ ವೇಳೆ 60 ವರ್ಷಗಳ ಹಿಂದೆ, ತಮಿಳುನಾಡಿನ ಮಂತ್ರಿ ಮಥಿಯಝಗನ್ ಕುಡಿದುಕೊಂಡು ಇಸ್ರೋ ಸಭೆಗೆ ಹೋಗಿದ್ದರು. ಅದರ ಪರಿಣಾಮ ಆಗಲೇ ತಮಿಳುನಾಡಿಗೆ ಸಿಗಬೇಕಿದ್ದ ಬಾಹ್ಯಾಕಾಶ ಉಡಾವಣಾ ಕೇಂದ್ರ ತಪ್ಪಿಹೋಗಿತ್ತು ಎಂದು ಡಿಎಂಕೆ ವಿರುದ್ಧ ಅಣ್ಣಾಮಲೈ ಹರಿಹಾಯ್ದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕಿ ಕನಿಮೋಳಿ, “ಚೀನಾವನ್ನು ಯಾರೂ ಶತ್ರು ರಾಷ್ಟ್ರ ಎಂದು ಘೋಷಿಸಿಲ್ಲ. ಸ್ವತಃ ಮೋದಿಯವರೇ ಚೀನಾ ಅಧ್ಯಕ್ಷರನ್ನು ಮಹಾಬಲಿಪುರಂಗೆ ಕರೆತಂದು ಆತಿಥ್ಯ ನೀಡಿದ್ದರು’ ಎಂದಿದ್ದಾರೆ.