ಹೊಸದಿಲ್ಲಿ: ಲೋಕಸಭೆ ಚುನಾವಣೆಯನ್ನು ಅಸ್ತವ್ಯಸ್ತ ಗೊಳಿಸುವ ರಹಸ್ಯ ಕಾರ್ಯಾಚರಣೆಯ ಭಾಗವಾಗಿ ಇಸ್ರೇಲ್‌ನ ಸಂಸ್ಥೆಯೊಂದು ಎಐ ಮಾಡೆಲ್‌ಗಳನ್ನು ಬಳಸಿಕೊಳ್ಳುವ ಪ್ರಯತ್ನ ನಡೆಸಿತ್ತು. ಆದರೆ ಈ ಕಾರ್ಯಾಚರಣೆಯನ್ನು ತಡೆಯಲಾಗಿದೆ ಎಂದು ಚಾಟ್‌ಜಿಪಿಟಿಯನ್ನು ಸೃಷ್ಟಿಸಿದ ಓಪನ್‌ಎಐ ಹೇಳಿಕೊಂಡಿದೆ.
ವಿಪಕ್ಷ ಕಾಂಗ್ರೆಸ್ ಪಕ್ಷವನ್ನು ಹೊಗಳಿ, ಆಡಳಿತಾ ರೂಢ ಬಿಜೆಪಿಯನ್ನು ಟೀಕಿಸುವ ಕಮೆಂಟ್‌ಗಳನ್ನು ಸೃಷ್ಟಿಸುವ ಕೆಲಸವನ್ನು ಇಸ್ರೇಲ್‌ನ ಕಂಪೆನಿ ಮಾಡಿದೆ ಎಂದು ಓಪನ್‌ಎಐ ವರದಿ ಹೇಳಿದೆ. ಪ್ರಚಾರ ನಿರ್ವ ಹಣ ಕಂಪೆನಿಯಾಗಿರುವ ಇಸ್ರೇಲ್‌ನ ಸ್ಟಾಯಿಕ್(ಎಸ್‌ಟಿಒಐಸಿ) ನೆಟ್‌ವರ್ಕ್ ಬಗ್ಗೆ ಮೇ ತಿಂಗಳದ ಆರಂಭ ದಲ್ಲೇ ಎಚ್ಚರಿಸಲಾಗಿತ್ತು. ಸಾರ್ವಜನಿಕರ ಅಭಿಪ್ರಾಯ ಗಳನ್ನು ರೂಪಿಸಲು ಮತ್ತು ರಾಜಕೀಯ ಫಲಿತಾಂಶಗಳ ಮೇಲೆ ಪರಿಣಾಮ ಬೀರಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗಿದೆ. ನಮ್ಮ ಐಒ ವ್ಯಾಪ್ತಿಯ ಮಾಡೆಲ್‌ಗಳನ್ನು ಬಳಸಿರುವುದನ್ನು ಗಮನಿಸಿದ್ದೇವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇಸ್ರೇಲ್‌ನಿಂದ ನಿರ್ವಹಣೆ ಮಾಡಲಾಗುವ ಅಕೌಂಟ್‌ಗಳ ಕ್ಲಸ್ಟರ್ ಮೂಲಕ ರಹಸ್ಯ ಕಾರ್ಯಾಚರಣೆಗಾಗಿ ಕಂಟೆಂಟ್ ಅನ್ನು ರಚಿಸುವುದು ಮತ್ತು ಎಡಿಟ್ ಮಾಡಲಾಗುತ್ತಿತ್ತು. ಬಳಿಕ ಅದನ್ನು ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್, ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್‌ನಲ್ಲಿ ಪೋಸ್ಟ್‌ಗಳನ್ನು ಹಂಚಲಾಗುತ್ತಿತ್ತು. ಆದರೆ ಕೂಡಲೇ ಈ ಅಕೌಂಟ್‌ಗಳನ್ನು ನಿಷೇಧಿಸಲಾಯಿತು ಎಂದು ವರದಿ ಹೇಳಿದೆ. ಜತೆಗೆ, ಭಾರ ತದ ಚುನಾವಣೆಯಲ್ಲಿ ಹಸ್ತ ಕ್ಷೇಪ ಆಗದಂತೆ ತಡೆ ಯುವ ನಮ್ಮ ಈ ಆಪರೇಷನ್‌ಗೆ “ಝೀರೋ ಝೆನೋ’ ಎಂದು ಹೆಸರಿಡಲಾಗಿತ್ತು ಎಂದೂ ಓಪನ್ ಎಐ ತಿಳಿಸಿದೆ.
ಭಾರತದ ಕೆಲವು ರಾಜಕೀಯ ಪಕ್ಷಗಳ ಪರವಾಗಿ ವಿದೇಶಿ ಕೈಗಳ ಹಸ್ತಕ್ಷೇಪ, ತಪ್ಪು ಮಾಹಿತಿ, ಪ್ರಭಾವ ಬೀರುವ ಮೂಲಕ ಬಿಜೆಪಿಯನ್ನು ಟಾರ್ಗೆಟ್ ಮಾಡಲಾಗಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ
-ರಾಜೀವ್ ಚಂದ್ರಶೇಖರ್, ಕೇಂದ್ರ ಸಚಿವ